ಬೆಂಗಳೂರು: ಕನ್ನಡ, ಕನ್ನಡತನ ಎಂಬುದು ಸ್ವಾಭಿಮಾನಿ ಕನ್ನಡಿಗರ ಉಸಿರು. ಬಹುಭಾಷಿಗರಿಗೆ ಅನ್ನ ಮತ್ತು ಆಶ್ರಯ ನೀಡಿದ ತಾಣ ಈ ನಾಡು. ಈ ನಿಟ್ಟಿನಲ್ಲಿ ಚಿತ್ರರಂಗದಲ್ಲೂ ಕೂಡ ಕನ್ನಡಿಗರನ್ನೇ ಕಟ್ಟಿಕೊಂಡು ಸಮಾಜಕ್ಕೊಂದು ಸಂದೇಶ ನೀಡಬಲ್ಲ ಚಿತ್ರ ಕಥೆಯನ್ನು ಹೆಣೆದು ಅದನ್ನು ಪರದೆ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ.
ಕಪ್ಪು ಬಿಳುಪಿನ ಬಣ್ಣ ಆಧರಿಸಿದ ಎರಡು ಜನಾಂಗೀಯ ಕಥೆ
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಸಂದೇಶ, ನಿರ್ದೇಶನದ ಎರಡನೇ ಚಿತ್ರ ʻಇನಾಮ್ದಾರʼ. ಬಿಡುಗಡೆಗೂ ಮುನ್ನವೇ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಸಿಲ್ಕು ಮಿಲ್ಕು ಸಾಂಗ್ ಮೀಲಿಯನ್ ಗಟ್ಟಲೆ ವ್ಯೂ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಸಿಲ್ಕು ಯಾವಾಗ ತೆರೆಮೇಲೆ ಬರ್ತಾಳೋ ಎಂದು ಪ್ರೇಕ್ಷಕರಲ್ಲಿ ಕುತೂಹಲವಿತ್ತು.
ಕನ್ನಡದ ಕನ್ನಡಿಗರೇ ನಿರ್ಮಿಸಿರುವ ಇನಾಮ್ದಾರ್ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲಿದೆ. ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಬಹುಭಾಷೆಯಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮವಿದ್ದು, ಅಕ್ಟೋಬರ್ 15 ಬೆಳಗಾವಿಯಲ್ಲಿ ಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇದು ಕಪ್ಪು ಬಿಳುಪೆಂಬ ಎರಡು ಬಣ್ಣಗಳನ್ನು ಆಧರಿಸಿದ, ಎರಡು ಜನಾಂಗಳ ಭೇದದ ಕಥೆ ಎಂದು ತಿಳಿದು ಬಂದಿದೆ.
ವರ್ಣ ಭೇದದ ಕಥೆಯ ಜೀವಾಳ
ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗ ನಡುವೆ ನಡೆಯುವ ವರ್ಣ ಭೇದವೇ ಕಥೆಯ ಜೀವಾಳ. ಚಿತ್ರದುದ್ದಕ್ಕೂ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದ್ದು, ಬಯಲು ಸೀಮೆಯ ಸೊಬಗು ಚಿತ್ರ ರಸಿಕರಿಗೆ ಮೆಚ್ಚಿಗೆಯಾಗಲಿದೆ. ಸದ್ಯ ಇನಾಮ್ದಾರ್ ಚಿತ್ರ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಇನ್ನು ಕೆಲವು ದಿನಗಳಲ್ಲಿ ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇಯ ಚಿತ್ರ ತೆರೆಯ ಮೇಲೆ ಮೂಡಿಬರಲಿದೆ.
ಇದನ್ನೂ ಓದಿ: Kannada New Movie: ʻಗರಡಿʼ ಟೈಟಲ್ ಟ್ರ್ಯಾಕ್‌ಗೆ ಅಭಿಮಾನಿಗಳು ಫಿದಾ; ನವೆಂಬರ್ 10ರಂದು ತೆರೆಗೆ!
ʻಕತ್ತಲೆ ಕೋಣೆʼ ಎನ್ನುವ ವಿಭಿನ್ನ ಹಾರರ್ ಬೇಸ್ ಇರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ, ಮೂರು ವರ್ಷಗಳ ಬ್ರೇಕ್ ನಂತರ ಭಾರೀ ತಯಾರಿಯೊಂದಿಗೆ ʻಇನಾಮ್ದಾರʼʼನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನಾಮ್ದರ್ ಚಿತ್ರದ ಮೂಲಕ ಚಿತ್ರ ರಸಿಕರಿಗೆ ವಿಭಿನ್ನವಾಗಿರುವ ಕಥೆಯನ್ನು ಮುಂದಿಡಲು ಬರುತ್ತಿದ್ದಾರೆ. ನಿರ್ದೇಶಕನ ಹಂಬಲಕ್ಕೆ ನಿರ್ಮಾಪಕನ ಬೆಂಬಲವಿದ್ದಾಗಲೇ ಅಲ್ಲವೆ ನಿರ್ದೇಶಕನಲ್ಲಿರುವ ಕ್ರೀಯಾಶೀಲತೆ ಇನ್ನಷ್ಟು ಜಾಗೃತವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಂದೇಶಗೆ ಸಿಕ್ಕ, ನಿರ್ಮಾಪಕರು ಹಾಗೂ ನಟರ ತಂಡ ಸಮಾನ ಮನಸ್ಕರು ಮತ್ತು ಆಸಕ್ತರಿದ್ದ ಕಾರಣದಿಂದಲೇ ಒಂದು ಉತ್ತಮ ಚಿತ್ರ ನಿರ್ಮಿಸಲು ಸಾಧ್ಯವಾಗಿದೆ ಅಂತಾರೆ ತಂಡದ ಕೆಲವು ಸದಸ್ಯರು.
ಇನಾಮ್ದಾರ್ ಕಥೆಗೆ ಪೂರಕವಾದ ಫ್ರೇಮ್ ಮೂಲಕ ಕಣ್ಣಿಗೆ ಕಟ್ಟಿಕೊಡುವ ರೀತಿಯ ಚಿತ್ರಣ ಸೆರೆ ಹಿಡಿದಿರುವ ಕ್ಯಾಮೆರಾ ಮ್ಯಾನ್ ಮುರುಳಿ ಅವರು ಚಿತ್ರದ ಇನ್ನೊಂದು ಭಾಗವಾಗಿದ್ದಾರೆ. ಬಯಲುಸೀಮೆಯಿಂದ ಹಿಡಿದು ಪಶ್ವಿಮ ಘಟ್ಟದ ತಪ್ಪಲಿನ ಕಾಡಿನಲ್ಲಿಯೂ ವಯಸ್ಸಿಗೆ ಮೀರಿದ ಉತ್ಸಾಹ ತೋರುತ್ತಾ, ಚಿತ್ರತಂಡವನ್ನು ಹುರಿದುಂಬಿಸಿ ಚಿತ್ರೀಕರಣ ಮಾಡಿ ಮುಗಿಸಿ ಈಗ ಒಂದು ಸಣ್ಣ ರಿಲೀಫ್ ಮೂಡಿನಲ್ಲಿದೆ ಚಿತ್ರತಂಡ. ಸಂದೇಶ ಅವರ ಈ ಜರ್ನಿಯಲ್ಲಿ ಶ್ರೇಯ ಮುರುಳಿ ಅವರ ಕಾರ್ಯ ಕೂಡ ಮೆಚ್ಚುವಂಥದ್ದು. ಗಂಡುಮೆಟ್ಟಿದ ನಾಡು ಬೆಳಗಾವಿಯ ಖಡಕ್ ಸ್ಟಾರ್ ರಂಜನ್ ಛತ್ರಪತಿ ಇನಾಮ್ದಾರ್ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.
ಕಥೆಗೆ ಬೇಕಾದಂತೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ. ಕುಡ್ಲದ ಬೆಡಗಿ ನಗುಮುಖದ ಸುಂದರಿ ಚಿರಶ್ರೀ ಅಂಚನ್ ಈಗಾಗಲೇ ಕನ್ನಡ, ತುಳು, ತಮಿಳು ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು, ಸದ್ಯ ಇನಾಮ್ದಾರ್ ಸಿನೆಮಾದ ಹಿರೋಯಿನ್. ಈ ಮೂಲಕ ಚಿತ್ರದ ನಾಯಕಿಯಾಗಿ ಅಂಚನ್, ಕುಡ್ಲದ ಕಂಪು ಹರಿಸಿದ್ದಾರೆ.
ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಎಂ.ಕೆ. ಮಠ ಅವರಂತ ಹಿರಿಯ ನಟರಿದ್ದು, ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ಧಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಕರಾವಳಿಯ ಪ್ರತಿಭೆಗಳ ಸಮಾಗಮ ಚಿತ್ರದಲ್ಲಿ ನೋಡಬಹುದಾಗಿದೆ. ಚಿತ್ರಕ್ಕೆ ಆರ್.ಕೆ. ಮಂಗಳೂರು ಸಹಕಾರ ನೀಡಿದ್ದು, ಸಹ ನಿರ್ದೇಶನದಲ್ಲಿ ರಾಜ್ ಕೃಷ್ಣ ಮತ್ತು ಮಿಥುನ್ ತೀರ್ಥಹಳ್ಳಿ ಸಾಥ್ ನೀಡಿದ್ದಾರೆ. ಸನತ್ ಉಪ್ಪುಂದ, ಅನೀಶ್ ಡಿಸೋಜಾ, ನಾಗೇಶ್ ಮತ್ತಿತರರು ಸಹಕಾರ ನೀಡಿದ್ದಾರೆ.