ಬೆಂಗಳೂರು: ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದ ಕನ್ನಡದ ನಟಿ ಸಂಜನಾ ಗಲ್ರಾನಿ (Sanjjanaa Galrani) ಕಳೆದ ಮೇ ತಿಂಗಳಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿನ ತಾಯಿಯಾಗಿರುವ ಸಂಜನಾ, ನಾಮಕರಣವನ್ನೂ ಈಗಾಗಲೇ ಮಾಡಿದ್ದಾರೆ. ಇದೀಗ ನಟಿ ಮೆಕ್ಕಾ ಮದೀನಾಗೆ ಹೊರಟು ನಿಂತಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೊ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಎಂತಲೂ ಹೇಳಿಕೊಂಡಿದ್ದಾರೆ. ಬುರ್ಕಾ ಧರಿಸಿ ವಿಡಿಯೊ ಮಾಡಿರುವ ಅವರು, ಮೆಕ್ಕಾ ಮದೀನಾಗೆ ಹೊರಟಿರುವ ಕಾರಣದಿಂದಾಗಿಯೇ ತಾವು ಬುರ್ಕಾ ಧರಿಸಿರುವುದಾಗಿಯೂ ತಿಳಿಸಿದ್ದಾರೆ.
ಮೆಕ್ಕಾ (Mecca) ಮದೀನಾಗೆ ಹೋಗುತ್ತಿರುವ ಕುರಿತು ವಿಡಿಯೊ ಮಾಡಿರುವ ಸಂಜನಾ, ‘ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಕಾ ಹಾಕಿಕೊಂಡು ಏನು ಮಾಡುತ್ತಿದ್ದಾರೆ ಎಂದು ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಹಾಗೂ ಮದೀನಾಗೆ ನನ್ನ ಪರಿವಾರದ ಜತೆ ಹೋಗುತ್ತಿದ್ದೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದವಿರಲಿ’ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Sandalwood Festive Fashion | ಗ್ರ್ಯಾಂಡ್ ಟ್ರೆಡಿಷನಲ್ ವೇರ್‌ನಲ್ಲಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್ ತಾರೆಯರು
ಸದ್ಯ ಚಿತ್ರರಂಗದ ಚಟುವಟಿಕೆಗಳಿಂದ ದೂರವಿರುವ ಸಂಜನಾ ಮಗುವಿನ ಪಾಲನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನಟಿ ಸಂಜನಾ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಂಧನವಾದಾಗಲೇ ಅವರು ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ (Aziz Pasha) ಎಂಬುವವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು.