Site icon Vistara News

Rakshit Shetty: ರಕ್ಷಿತ್​ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೊ ಟ್ರೈಲರ್’​ ಬಿಡುಗಡೆ

saptasagaradache ello

ಬೆಂಗಳೂರು: ಹೇಮಂತ್ ಎಮ್​ ರಾವ್​ ನಿರ್ದೇಶನದ ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಿಸಿದ ಸಪ್ತ ಸಾಗರದಾಚೆ ಎಲ್ಲೊ (Sapta Sagaradaache Ello) ಸಿನಿಮಾದ ಟ್ರೈಲರ್ ಗುರುವಾರ (ಆಗಸ್ಟ್​ 17ರಂದು) ಲಾಂಚ್​ ಆಗಿದೆ. ಸಂಜೆ 6 ಗಂಟೆ 6 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾದ ಟ್ರೈಲರ್​ ಬಗ್ಗೆ ಸ್ಯಾಂಡಲ್​ವುಡ್​ ಕಾರಿಡಾರ್​ನಲ್ಲಿ ಜೋರು ಚರ್ಚೆ ನಡೆಯುತ್ತಿದೆ. ಸೆಪ್ಟೆಂಬರ್​ 1ರಂದು ಸಿನಿಮಾದ ಮೊದಲ ಭಾಗ ತೆರೆಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಟ್ರೈಲರ್ ಮೂಲಕ ಹಲವು ಸುಳಿವುಗಳನ್ನು ನೀಡಲಾಗಿದೆ.

ಕೆಲವು ದಿನಗಳ ಹಿಂದೆ ಆಗಸ್ಟ್​ 17ರಂದು ಟ್ರೈಲರ್ ಬಿಡುಗಡೆ ಮಾಡುವುದಾಗಿ ಸಿನಿ ತಂಡ ಘೋಷಿಸಿತ್ತು. ಅಂತೆಯೇ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಿ ಕನ್ನಡ ಸಿನಿ ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸಿದ್ದಾರೆ. ಪರಂವಃ ಯೂಟ್ಯೂಬ್​ ಚಾನೆಲ್​ನಲ್ಲಿ ಟ್ರೈಲರ್​ ಲಭ್ಯವಿದ್ದು. ಒಟ್ಟು 3 ನಿಮಿಷ 14 ಸೆಕೆಂಡ್​ಗಳಲ್ಲಿ ಸಿನಿಮಾದ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ.

ನವಿರಾದ ಪ್ರೇಮ ಕತೆ

ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಪ್ರೇಮ ಕತೆಯಿಂದ ಕೂಡಿರುತ್ತದೆ ಎಂಬುದು ಹಿಂದೆಯೇ ಗೊತ್ತಾಗಿತ್ತು. ಟ್ರೈಲರ್ ಮೂಲಕ ಅದರ ತೀವ್ರತೆ ಅರ್ಥವಾಗುತ್ತಿದೆ. ಎರಡು ಹೃದಯಗಳ ಬೆಸುಗೆ ಹಾಗೂ ವಿಧಿ ಅಟ್ಟಹಾಸ ಸಿನಿಮಾದಲ್ಲಿರಬಹುದು ಎಂಬುದು ಟ್ರೈಲರ್​ ಮೂಲಕ ಸ್ಪಷ್ಟವಾಗಿದೆ. ಸಮುದ್ರದ ಅಲೆಗಳಂತೆ ಬರುವ ಕಷ್ಟಗಳು ಹಾಗೂ ಸಾಗರದ ತಟದಲ್ಲಿನ ಪ್ರೇಮ ಕತೆಯನ್ನು ನವಿರಾಗಿ ತೋರಿಸಲಾಗಿದೆ.

ನಾಯಕ ನಾಯಕಿಯ ಪ್ರೇಮ, ಪೊಲೀಸರ ವಶಕ್ಕೆ ಸಿಲುಕುವ ನಾಯಕ, ಬಿಟ್ಟೂ ಬಿಡದೇ ಪ್ರೀತಿಸುವ ನಾಯಕಿ, ಅದಕ್ಕಾಗಿ ಆಕೆ ಎದುರಿಸುತ್ತಿರುವ ಕಷ್ಟಗಳು ಈ ಸಿನಿಮಾದಲ್ಲಿರಬಹುದು ಎಂಬುದು ಟ್ರೈಲರ್​ ನೋಡಿದರೆ ತಿಳಿಯುತ್ತದೆ. ಹಳೆಯ ಟೇಪ್​ ರೆಕಾರ್ಡರ್​ ಒಂದು ಈ ಕತೆಗೆ ಒಂದು ಉಪಮೆ ಇದ್ದಂತಿದೆ.

ಇದನ್ನು ಓದಿ: Rakshit shetty: ಸಪ್ತಸಾಗರದಾಚೆ ಎಲ್ಲೋ ʻಹೋರಾಟʼ ಸಾಂಗ್‌ ಔಟ್‌!

ನವಿರಾದ ಪ್ರೇಮಕತೆಯ ನಾಯಕಿಯ ಮಾತಿನೊಂದಿಗೆ ಆರಂಭಗೊಂಡರೆ ನಿಧಾನಕ್ಕೆ ಅದು ಕರಾಳ ದಿಕ್ಕಿನತ್ತ ಸಾಗುವುದು ಟ್ರೈಲರ್​ನಲ್ಲಿ ಗೋಚರಿಸಿದೆ. ಧನಿಕರ ದರ್ಪ, ದಬ್ಬಾಳಿಕೆ, ಬಡಪಾಯಿ ಹುಡುಗಿಯ ಆಕ್ರೋಶವು ಈ ಟ್ರೈಲರ್​ನಲ್ಲಿ ಕಂಡು ಬಂದಿದೆ. ಈ ಎಲ್ಲ ಕತೆಗಳಿಗೆ ತಿಳಿ ನೀಲ ಸಾಗರದ ಅಲೆಗಳು ರೂಪಕದಂತಿದೆ. ಸಮುದ್ರವೂ ಕತೆಯ ದೊಡ್ಡ ಭಾಗವೆಂಬುದು ಟ್ರೈಲರ್​ ಮೂಲಕ ಗೊತ್ತಾಗಿದೆ.

ನಾಯಕಿಯದ್ದೇ ಧ್ವನಿ

ಟ್ರೈಲರ್​ನಲ್ಲಿ ನಾಯಕಿ ಪಾತ್ರ ವಹಿಸಿರುವ ರುಕ್ಮಿಣಿ ವಸಂತ್ ಅವರ ಧ್ವನಿಯೇ ಕೇಳಿ ಬರುತ್ತಿದೆ. ಅವರೇ ಕತೆಯನ್ನು ನಿರೂಪಣೆ ಮಾಡಿದಂತಿದೆ. ಸರಳವಾಗಿ ಕಾಣುವ ಅವರು ತಮ್ಮ ಪಾತ್ರದಲ್ಲಿ ತುಸು ಹೆಚ್ಚು ತಲ್ಲೀನರಾಗಿದ್ದಾರೆ. ರಕ್ಷಿತ್​ ಶೆಟ್ಟಿ ಲವರ್​ ಬಾಯ್​ ಆಗಿ, ದುರಂತ ನಾಯಕನಾಗಿ ಮಿಂಚಿದ್ದಾರೆ. ವಿಭಿನ್ನವಾದ ಹೇರ್​ಸ್ಟೈಲ್​ ಮೂಲಕವೂ ಅವರು ಗಮನ ಸೆಳೆದಿದ್ದಾರೆ.

ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಟ್ರೈಲರ್​ನಲ್ಲಿ ಮೇಳೈಸಿದೆ. ಹಿತ ಮತ್ತು ಮಿತವಾಗಿರುವ ಸಂಗೀತ ವೀಕ್ಷಕನ ಮನಕ್ಕೆ ನಾಟುವಂತಿದೆ. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1ಕ್ಕೆ ಬಿಡುಗಡೆ ಆಗಲಿದೆ. ಒಂದು ತಿಂಗಳ ಅಂತರದಲ್ಲಿ ಸಿನಿಮಾದ ಎರಡನೇ ಭಾಗವೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೊತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.

Exit mobile version