Site icon Vistara News

Sara Ali Khan : ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಮಾಡಿದ ನಟಿ ಸಾರಾ ಅಲಿ ಖಾನ್‌, ಇಲ್ಲಿದೆ ವಿಡಿಯೊ

#image_title

ಮುಂಬೈ: ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ (Sara Ali Khan) ಸದ್ಯ ತಮ್ಮ ಮುಂಬರುವ ಚಿತ್ರವಾದ ʼಜರಾ ಹಟ್ಕೆ ಜರಾ ಬಚ್ಕೆʼ ಸಿನಿಮಾದ ಪ್ರಚಾರ ಕೆಲಸದಲ್ಲಿದ್ದಾರೆ. ಈ ಮಧ್ಯೆ ಅವರು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದಿದ್ದಾರೆ. ನಟಿ ಸಾರಾ ದೇಗುಲದಲ್ಲಿ ಪೂಜೆ ಸಲ್ಲಿಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಇದನ್ನೂ ಓದಿ: Pawan Basrur: ’ಕ್ಲಿಕ್’ ಚಿತ್ರದ ಮೂಲಕ ರವಿ ಬಸ್ರೂರು ಪುತ್ರ ಪವನ್ ಬಸ್ರೂರು ಸಿನಿಮಾ ಲೋಕಕ್ಕೆ ಎಂಟ್ರಿ
ಬುಧವಾರ ಬೆಳಗ್ಗೆಯೇ ನಟಿ ಸಾರಾ ಅಲಿ ಖಾನ್‌ ಅವರು ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಇತರೆ ಭಕ್ತರೊಂದಿಗೆ ದೇವರ ಪ್ರಾರ್ಥನೆ ಮಾಡಿದ್ದಾರೆ. ಹಾಗೆಯೇ ಅಲ್ಲಿನ ಪೂಜಾರಿಗಳ ಜತೆ ಮಾತನಾಡಿದ್ದಾರೆ. ಕಡು ಗುಲಾಬಿ ಬಣ್ಣದ ಚೂಡಿದಾರ್ ತೊಟ್ಟ ನಟಿ, ತಲೆಯ ಮೇಲೆ ದುಪ್ಪಟ್ಟಾ ಹೊದ್ದು ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಈ ದೇಗುಲದ ಭೇಟಿಗೂ ಮೊದಲು ಸಾರಾ ಹಾಗೂ ನಟ ವಿಕ್ಕಿ ಕೌಶಲ್‌ ಅವರು ಲಕ್ನೋದಲ್ಲಿ ಮತ್ತೊಂದು ದೇಗುಲಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿ ಇಬ್ಬರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದ ನಟಿ, “ಜೈ ಭೋಲೆನಾಥ್‌” ಎಂದು ಕ್ಯಾಪ್ಶನ್‌ ಕೊಟ್ಟಿದ್ದರು. ಅದರಲ್ಲಿ ನಟಿ ಬಿಳಿ ಬಣ್ಣದ ಚೂಡಿದಾರ್ ಹಾಗೂ ವಿಕ್ಕಿ ಬೂದು ಬಣ್ಣದ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ತೊಟ್ಟಿದ್ದನ್ನು ಕಾಣಬಹುದಾಗಿದೆ. ಲಕ್ನೋದಲ್ಲಿ ಸಾರಾ ಅವರು ಅಲ್ಲಿನ ಪ್ರಸಿದ್ಧ ಖಾದ್ಯವನ್ನೂ ಸವಿದಿದ್ದಾರೆ. ಅದರ ಫೋಟೋವನ್ನೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, “ನಾನು ತಿನ್ನದೇ ಇರಲು ಸಾಧ್ಯವೇ ಇಲ್ಲದ ವಿಶೇಷವಾದ ಖಾದ್ಯ” ಎಂದು ಬರೆದುಕೊಂಡಿದ್ದರು.

ಲಕ್ನೋ ಪ್ರವಾಸಕ್ಕೂ ಮೊದಲು ಈ ತಾರಾ ಜೋಡಿ ರಾಜಸ್ಥಾನದ ಅಜ್ಮರ್‌ ಶರೀಫ್‌ ದರ್ಗಾಕ್ಕೆ ತೆರಳಿ ಅಲ್ಲಿಯೂ ತಮ್ಮ ಚಿತ್ರದ ಪ್ರಚಾರ ನಡಸಿದ್ದರು. ಅದಕ್ಕೂ ಮೊದಲು ಅಹಮದಾಬಾದ್‌ನಲ್ಲಿ ನಡೆದ ಚೆನ್ನೈ ಮತ್ತು ಗುಜರಾತ್‌ನ ಐಪಿಎಲ್‌ ಫೈನಲ್‌ ಪಂದ್ಯವನ್ನು ವೀಕ್ಷಿಸಿದ್ದರು. ಅಲ್ಲಿ ಚೆನ್ನೈ ಜಯಭೇರಿ ಬಾರಿಸಿದ ತಕ್ಷಣ ಸಾರಾ ಮತ್ತು ವಿಕ್ಕಿ ಕುಣಿದು ಕುಪ್ಪಳಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಸಾರಾ ಅಲಿ ಖಾನ್‌ ಮತ್ತು ವಿಕ್ಕಿ ಕೌಶಲ್‌ ನಟಿಸಿರುವ “ಜರಾ ಹಟ್ಕೆ ಜರಾ ಬಚ್ಕೆʼ ಚಿತ್ರ ಇದೇ ಶುಕ್ರವಾರದಂದು ತೆರೆ ಕಾಣಲಿದೆ. ಲಕ್ಷ್ಮಿ ಉತೆಕರ್‌ ಅವರು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಸಾರಾ ಮತ್ತು ವಿಕ್ಕಿ ವಿವಾಹಿತ ದಂಪತಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿ ಪ್ರೀತಿಯಲ್ಲಿದ್ದೂ ವಿಚ್ಛೇದನಕ್ಕಾಗಿ ಒದ್ದಾಡುವ ಕಥೆ ಇದಾಗಿರಲಿದೆ.

Exit mobile version