Site icon Vistara News

Sarath Babu: ಶರತ್ ಬಾಬು ನಿಧನದ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ ಸಹೋದರಿ

Sarath Babu alive and recovering sister statement

ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರತ್ ಬಾಬು (Sarath Babu) ಅವರು ನಿಧನ ಹೊಂದಿದ್ದಾರೆಂಬ ಸುದ್ದಿ ವೈರಲ್‌ ಆಗಿತ್ತು. ಅದೆಷ್ಟೋ ಸಿನಿ ಗಣ್ಯರು ಕೂಡ ಟ್ವೀಟ್‌ ಮೂಲಕ ನಟನಿಗೆ ಸಂತಾಪ ಸೂಚಿಸಿದ್ದರು. ಮೇ 3ರಂದು ರಾತ್ರೋ ರಾತ್ರಿ ಶರತ್ ಬಾಬು ಸಹೋದರಿ ಇದು ಸುಳ್ಳು ಸುದ್ದಿ ಎಂದು ಹೇಳಿಕೆ ನೀಡಿದ್ದಾರೆ. ನಟ ಶರತ್ ಬಾಬು ಅವರು ಜೀವಂತವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಹೋದರಿ ಸ್ಪಷ್ಟ ಪಡಿಸಿದ್ದಾರೆ. ಶರತ್ ಬಾಬು ಅವರನ್ನು ಸದ್ಯ ವೆಂಟಿಲೇಟರ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಕೆಲವು ದಿನಗಳಿಂದ ಶರತ್ ಬಾಬು ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿದ್ದು, ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವರದಿಗಳ ಪ್ರಕಾರ, ಶರತ್ ಬಾಬು ಅವರು ಸೆಪ್ಸಿಸ್ ಸೋಂಕಿಗೆ ಒಳಗಾಗಿದ್ದರು. ಇದು ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿತ್ತು.

ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಟ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಶರತ್ ಬಾಬು ಸಾವಿನ ಕುರಿತಾದ ವರದಿಗಳಿಗೆ ಪ್ರತಿಕ್ರಿಯಿಸಿದ ಅವರ ಸಹೋದರಿ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ʻʻಶರತ್ ಬಾಬು ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಶರತ್ ಬಾಬು ಸ್ವಲ್ಪ ಚೇತರಿಸಿಕೊಂಡಿದ್ದಾರೆ. ಶೀಘ್ರವೇ ಸಂಪೂರ್ಣ ಗುಣಮುಖರಾಗಿ ಮಾಧ್ಯಮಗಳೊಂದಿಗೆ ಮಾತನಾಡಲಿ ಎಂದು ಹಾರೈಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಸುದ್ದಿಯನ್ನು ನಂಬಬೇಡಿ ಎಂಬುದು ನನ್ನ ಮನವಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Vishal | ವಿಶೇಷ ಚೇತನ ನಟಿ ಜತೆ ನಟ ವಿಶಾಲ್‌ ಡೇಟಿಂಗ್‌?

ಶರತ್ ಬಾಬು ಅವರ ಸಹೋದರನ ಮಗ ಆಯುಷ್ ತೇಜಸ್ ಕೂಡ “ಶರತ್ ಬಾಬು ಅವರ ಆರೋಗ್ಯ ಸ್ಥಿರವಾಗಿದೆ. ದಯವಿಟ್ಟು ಯಾವುದೇ ಸುಳ್ಳು ವದಂತಿಗಳನ್ನು ನಂಬಬೇಡಿ. ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆಶೀರ್ವಾದಕ್ಕಾಗಿ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಧನ್ಯವಾದಗಳುʼʼ ಎಂದು ಹೇಳಿಕೊಂಡಿದ್ದರು.

ನಟ ಶರತ್ ಕುಮಾರ್ ಕೂಡ ಟ್ವಿಟರ್‌ನಲ್ಲಿ ಶರತ್ ಬಾಬು ಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ಶರತ್ ಬಾಬು ಸರ್ ಬಗ್ಗೆ ಬಂದಿರುವ ಸುದ್ದಿ ಸುಳ್ಳು, ದಯವಿಟ್ಟು ವದಂತಿಗಳನ್ನು ಹರಡಬೇಡಿ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸೋಣ” ಎಂದು ಬರೆದಿದ್ದಾರೆ.

ʻಅಮೃತವರ್ಷಿಣಿʼ ಚಿತ್ರದಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಜತೆ ನಟಿಸರುವ ಶರತ್ ಬಾಬು ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. 1951ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಇವರು 1973ರಲ್ಲಿ ತೆರೆಕಂಡಿದ್ದ `ರಾಮರಾಜ್ಯಂ’ ತೆಲುಗು ಚಿತ್ರದಿಂದ ಸಿನಿಪಯಣವನ್ನು ಆರಂಭಿಸಿದ್ದರು. ಶರತ್ ಬಾಬು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಾಯಕನಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 8 ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Exit mobile version