ಮುಂಬೈ: ಬಾಲಿವುಡ್‌ನ ಹಿರಿಯ ಕಲಾವಿದ ಸತೀಶ್ ಕೌಶಿಕ್ (Satish Kaushik) ಗುರುವಾರ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. 66 ವರ್ಷ ವಯಸ್ಸಾಗಿದ್ದ ಅವರು ಬಾಲಿವುಡ್‌ನಲ್ಲಿ ಮಿಂಚಿದ ಕಥೆಯೇ ಒಂದು ಅದ್ಭುತ. ಕೇವಲ 800 ರೂ. ಮತ್ತು ಜೇಬಿನ ತುಂಬ ಕನಸುಗಳನ್ನೇ ಹೊತ್ತುಕೊಂಡು ಮುಂಬೈಗೆ ಬಂದಿದ್ದ ಸತೀಶ್ ಅವರ ಸಿನಿಮಾ ಜರ್ನಿಯ ಕಥೆ ಇಲ್ಲಿದೆ.
ಇದನ್ನೂ ಓದಿ: Satish Kaushik: ಬಾಲಿವುಡ್ ನಟ ಸತೀಶ ಕೌಶಿಕ್ ನಿಧನ
ಸತೀಶ್ ಅವರು ದೆಹಲಿಯ ಕಿರೋರಿ ಮಾಲ್ ಕಾಲೇಜಿನ ವಿದ್ಯಾರ್ಥಿ. ರಂಗಭೂಮಿಯ ಪ್ರಸಿದ್ಧ ʼದಿ ಪ್ಲೇಯರ್ಸ್ʼ ತಂಡದಲ್ಲಿ ಕಲಾವಿದರಾಗಿದ್ದವರು. ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ), ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)ದಲ್ಲೂ ತರಬೇತಿ ಪಡೆದಿದ್ದಾರೆ. ನಟನಾಗಬೇಕು ಎನ್ನುವ ಕನಸಿನೊಂದಿಗೆ ಮುಂಬೈಗೆ 800 ರೂ. ಇಟ್ಟುಕೊಂಡು ಬಂದರು. ಹಾಗೆ ಬಂದ ಅವರು ಮುಂದೆ ನಟನಾಗಿ, ಚಿತ್ರಕಥೆ ಬರಹಗಾರನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಜನರ ಮನಸ್ಸನ್ನು ಗೆದ್ದರು.
ಸತೀಶ್ ಅವರು ಮುಂಬೈನಲ್ಲಿ ಮೊದಲು ಮಾಡಿದ ಕೆಲಸವೆಂದರೆ ಅದು ʼಮಾಸೂಮ್ʼ(1983) ಸಿನಿಮಾದಲ್ಲಿ ನಿರ್ದೇಶಕ ಶೇಖರ್ ಕಪೂರ್ ಅವರಿಗೆ ಸಹಾಯ ಮಾಡಿದ್ದು. ನಂತರ ಅನಿಲ್ ಕಪೂರ್ ಮತ್ತು ಶ್ರೀದೇವಿ ನಟನೆಯ ʼಮಿಸ್ಟರ್ ಇಂಡಿಯಾʼ(1987) ಸಿನಿಮಾದಲ್ಲಿಯೂ ಕೆಲಸ ಮಾಡಿದರು. ಅದರಲ್ಲಿ ಅವರ ಮಾಡಿದ ಪಾತ್ರ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಮುಂದೆ ಅಂತದ್ದೇ ಹಲವು ಪಾತ್ರಗಳಲ್ಲಿ ನಟಿಸುವ ಅವಕಾಶ ಸತೀಶ್ ಅವರಿಗೆ ಸಿಕ್ಕಿತು.
ಇದನ್ನೂ ಓದಿ: Samantha: ʻಖುಷಿʼ ಸಿನಿಮಾ ಸೆಟ್‌ನಲ್ಲಿ ಸಮಂತಾ: ಕೇಕ್ ಕತ್ತರಿಸಿ ಸಂಭ್ರಮಸಿದ ಚಿತ್ರತಂಡ
ಹೀಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿದ ಸತೀಶ ಅವರಿಗೆ 1993ರಲ್ಲಿ ಬೋನಿ ಕಪೂರ್ ನಿರ್ಮಾಣದ ʼರೂಪ್ ಕಿ ರಾಣಿ ಚೋರೋನ್ ಕಾ ರಾಜಾʼ ಸಿನಿಮಾವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿತು. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಮತ್ತು ಶ್ರೀದೇವಿ ಜೋಡಿಯಾಗಿ ನಟಿಸಿದ್ದಾರೆ. ಇದು ಆ ಕಾಲದ ದುಬಾರಿ ಸಿನಿಮಾ ಎನ್ನುವ ಖ್ಯಾತಿ ಪಡೆದುಕೊಂಡಿತು. ಇದಾಗಿ ಒಂದು ದಶಕದ ನಂತರ ಸತೀಶ್ ಅವರು ಸಲ್ಮಾನ್ ಖಾನ್ ಅವರ ‘ತೇರೆ ನಾಮ್’ (2003) ಸಿನಿಮಾವನ್ನು ನಿರ್ದೇಶಿಸಿದರು. ಅದು ಕೂಡ ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಯಿತು. ಹಾಗೆಯೇ ಸತೀಶ್ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು.
ಕಳೆದ ಕೆಲವು ವರ್ಷಗಳಲ್ಲಿ, ಸತೀಶ್ ಅವರು ಹಲವು ವೆಬ್ ಸೀರಿಸ್‌ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಸ್ಕ್ಯಾಮ್ 92’ ಸೀರಿಸ್‌ನಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.