ಮುಂಬೈ: ಬಾಲಿವುಡ್ ನಟ ಮನೋಜ್ ಬಾಜಪೇಯಿ (Manoj Bajpayee) ಅವರಿಗೆ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಟ್ಟ ಸಿನಿಮಾವೆಂದರೆ ಅದು 1998ರಲ್ಲಿ ಬಿಡುಗಡೆಯಾದ ಸತ್ಯ ಸಿನಿಮಾ. ಆ ಸಿನಿಮಾದಲ್ಲಿ ಮನೋಜ್ ಅವರು ಮುಂಬೈನ ಸ್ಟ್ರೀಟ್ ಗ್ಯಾಂಗ್‌ಸ್ಟರ್ ಭಿಕು ಮ್ಹಾತ್ರೆ ಪಾತ್ರದಲ್ಲಿ ಮಿಂಚಿದ್ದರು. ಆ ಸಿನಿಮಾ ಬಿಡುಗಡೆಯಾಗಿ ಸೋಮವಾರಕ್ಕೆ ಬರೋಬ್ಬರಿ 25 ವರ್ಷಗಳು ತುಂಬಿವೆ. ಆ ಸವಿಗಳಿಗೆಯಲ್ಲಿ ಮನೋಜ್ ಅವರು ಸಿನಿಮಾ ಬಗೆಗಿನ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಸತ್ಯ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಅವರು ನಿರ್ದೇಶನ ಮಾಡಿದ್ದರು. ಆ ಕಾಲದಲ್ಲಿ ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕರು ಇರುತ್ತಿರಲಿಲ್ಲವಂತೆ. ಹಾಗಾಗಿ ರಾಮ್ ಅವರು ಮನೋಜ್ ಅವರ ಕೈಗೆ 20 ಸಾವಿರ ರೂ. ಕೊಟ್ಟು, ಪಾತ್ರಕ್ಕೆ ಬೇಕಾಗುವಂತಹ ಬಟ್ಟೆಯನ್ನು ಖರೀದಿಸು ಎಂದು ಹೇಳಿದ್ದರಂತೆ. ಮನೋಜ್ ಅವರು ಮುಂಬೈನ ಬಾಂದ್ರಾ ಸ್ಟ್ರೀಟ್‌ನಲ್ಲಿ ಬಟ್ಟೆ ಖರೀದಿಸಿದ್ದರಂತೆ. 20 ಸಾವಿರ ರೂಪಾಯಿಯಲ್ಲಿ ಪೂರ್ತಿ ಸಿನಿಮಾಕ್ಕೆ ಬೇಕಾಗುವ ಎಲ್ಲ ಬಟ್ಟೆಯನ್ನು ಖರೀದಿಸಿಕೊಂಡು ಬಂದಿದ್ದರಂತೆ.
ಇದನ್ನೂ ಓದಿ: Viral News : ಮಳೆಯಲ್ಲಿ ಜೊಮೆಟೊ ಡೆಲಿವರಿ ಏಜೆಂಟ್ ಡ್ಯಾನ್ಸ್! ಈ ಫೋಟೋ ಹಿಂದಿನ ರಹಸ್ಯ ಏನು?
ಅದೇ ರೀತಿಯಲ್ಲಿ ಸಿನಿಮಾದಲ್ಲಿ ಮನೋಜ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದ ಶಿಫಾಲಿ ಶಾ ಕೂಡ ಸಿನಿಮಾ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನನಗೆ ಬಳಕೆ ಮಾಡಿ ಬಿಟ್ಟಿರುವ ಸೀರೆಯೇ ಬೇಕು ಎಂದು ಕೇಳಿ ಉಟ್ಟಿದ್ದೆ. ಜುರಾಸಿಕ್ ಪಾರ್ಕ್ ಸಿನಿಮಾ ಬಗ್ಗೆ ಮಾತನಾಡುವ ಸನ್ನಿವೇಶದಲ್ಲಿ ಮಾತ್ರವೇ ಹೊಸ ಸೀರೆ ಉಟ್ಟಿದ್ದೆ. ಸಪ್ನೆ ಮೇ ಮಿಲ್ತಿ ಹೈ ಹಾಡಿನಲ್ಲಿ ನಾನು ನನ್ನ ಸ್ವಂತ ಆಭರಣಗಳನ್ನೇ ಧರಿಸಿದ್ದೆ. ಅವೆಲ್ಲವೂ ನನ್ನ ಅಜ್ಜಿಯ ಆಭರಣಗಳಾಗಿದ್ದವು” ಎಂದು ಅವರು ಹೇಳಿಕೊಂಡಿದ್ದಾರೆ.
ಸತ್ಯ ಸಿನಿಮಾವನ್ನು ಅನುರಾಗ್ ಕಶ್ಯಪ್ ಮತ್ತು ಸೌರಭ್ ಶುಕ್ಲಾ ಸಹ ಬರೆದಿದ್ದರು. ಸೌರಭ್ ಕಥೆ ಬರೆಯುವುದರ ಜತೆ ಚಿತ್ರದಲ್ಲಿ ಕಲ್ಲು ಮಾಮ ಎಂಬ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಜೆಡಿ ಚಕ್ರವರ್ತಿ, ಊರ್ಮಿಳಾ ಮಾತೋಂಡ್ಕರ್, ಆದಿತ್ಯ ಶ್ರೀವಾಸ್ತವ, ಪರೇಶ್ ರಾವಲ್, ಸಂಜಯ್ ಮಿಶ್ರಾ, ಸುಶಾಂತ್ ಸಿಂಗ್ ಮತ್ತು ಮಕರಂದ್ ದೇಶಪಾಂಡೆ ಈ ಸಿನಿಮಾದಲ್ಲಿ ನಟಿಸಿದ್ದರು. ಆ ಕಾಲದಲ್ಲಿ ಈ ಸಿನಿಮಾ ದೊಡ್ಡ ಯಶಸ್ಸನ್ನು ಕಂಡಿತ್ತು.