ಬೆಂಗಳೂರು: ಕನ್ನಡದ ಹಿರಿಯ ಸಿನಿಮಾ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ (Savarkar) ಕುರಿತಾದ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಾವರ್ಕರ್ ಪಾತ್ರವನ್ನು ನಟ ಸುನೀಲ್ ರಾವ್ ನಿಭಾಯಿಸುತ್ತಿದ್ದಾರೆ. ಇದೀಗ ಚಿತ್ರದ ಫಸ್ಟ್ ಲುಕ್ ಬಿಡಿಗಡೆಗೊಂಡಿದೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಈಗಾಗಲೇ ಮುಂಬೈಗೆ ಹೋಗಿ ಬಂದಿದ್ದಾರೆ ಎಂದು ವರದಿಯಾಗಿದೆ. ಕಪ್ಪು ಕೋಟು, ಕಪ್ಪು ಟೋಪಿ ಧರಿಸಿ, ಒಂದು ಕೈಯಲ್ಲಿ ಬಂದೂಕು ಮತ್ತೊಂದು ಕೈಯಲ್ಲಿ ಪೆನ್ನು ಹಿಡಿದಿರುವ ಸುನೀಲ್ ರಾವ್ ಪೋಸ್ಟ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್‌ವುಡ್ ಅವರ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದೆ. ಇಷ್ಟು ದಿನ ಸುನೀಲ್ ಅವರು ಹಾಸ್ಯ ಕತೆಗಳಲ್ಲಿ ನಟಿಸುತ್ತ ಬಂದಿದ್ದಾರೆ. ಇದೀಗ ಈ ಸಿನಿಮಾ ಮೂಲಕ ಮೊದಲ ಬಯೋಪಿಕ್ ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಮಾರ್ಚ್ 25ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಭಾರೀ ಬಜೆಟ್ ಸಿನಿಮಾ ಆಗಲಿರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮಾರ್ಚ್ 12 ರಂದು ಸಿನಿಮಾದ ಟೀಸರ್ ಬಿಡುಗಡೆ ಆಗಬೇಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಟೀಸರ್ ಬಿಡುಗಡೆ ಮುಂದೂಡಲಾಗಿದೆ.
ಇದನ್ನೂ ಓದಿ: Veer Savarkar | ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೊ ಮರು ಅಳವಡಿಕೆ: ಗೃಹ ಸಚಿವ, ಶಿಕ್ಷಣ ಸಚಿವರ ನೇತೃತ್ವ
ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಹೀಗೆ ಅನೇಕ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಸಿನಿಮಾಟೋಗ್ರಫಿ, ಥ್ರಿಲ್ಲರ್ ಮಂಜು ಅವರ ಸಾಹಸ ಮತ್ತು ಸ್ಯಾಮ್ ಸಂಗೀತ ಚಿತ್ರಕ್ಕಿರಲಿದೆ.