ಮುಂಬೈ: ಈ ವರ್ಷದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ‘ಸ್ವತಂತ್ರ ವೀರ್ ಸಾವರ್ಕರ್’ (Swatantrya Veer Savarkar) ಮಾರ್ಚ್ 22ರಂದು ತೆರೆ ಕಂಡಿದೆ. ಹಿಂದಿ ಮತ್ತು ಮರಾಠಿಯಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ಅವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಿತ್ರವನ್ನು ಬಾಲಿವುಡ್ ನಟ ರಣದೀಪ್ ಹೂಡಾ (Randeep Hooda) ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಕಲೆಕ್ಷನ್ ಮಾಡಿದ್ದ ಈ ಚಿತ್ರ ಇದುವರೆಗೆ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.
ಮೂರು ದಿನಗಳ ಕಲೆಕ್ಷನ್ ಎಷ್ಟು?
‘ಸ್ವತಂತ್ರ ವೀರ್ ಸಾವರ್ಕರ್’ (Swatantra Veer Savarkar) ಮೂರು ದಿನಗಳಲ್ಲಿ ಭಾರತದಲ್ಲಿ ಸುಮಾರು 6 ಕೋಟಿ ರೂ. ಗಳಿಸಿದೆ. ಮೊದಲ ದಿನ ಕೇವಲ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಕಲೆಕ್ಷನ್ ಶನಿವಾರ ಮತ್ತು ಭಾನುವಾರ ವೃದ್ಧಿಸಿದೆ. ಎರಡನೇ ದಿನ (ಮಾರ್ಚ್ 23) ಸುಮಾರು 2.25 ಕೋಟಿ ರೂ. ಮತ್ತು ಮೂರನೇ ದಿನವಾದ ಭಾನುವಾರ (ಮಾರ್ಚ್ 24) 2.60 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಚಿತ್ರ ತುಸು ಚೇತರಿಕೆ ಕಂಡಿದೆ. ಇಂದು (ಮಾರ್ಚ್ 25) ಹೋಳಿಯ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ರಜೆ ಇರುವುದರಿಂದ ಚಿತ್ರ ಉತ್ತಮ ಗಳಿಕೆ ಮಾಡಲಿದೆ ಎನ್ನುವ ವಿಶ್ವಾಸದಲ್ಲಿದೆ ಚಿತ್ರ ತಂಡ.
ಕಲಾವಿದರಾದ ಅಂಕಿತಾ ಲೋಖಂಡೆ, ಅಮಿತ್ ಸಿಯಾಲ್, ರಾಕೇಶ್ ಚತುರ್ವೇದಿ, ಲೋಕೇಶ್ ಮಿತ್ತಲ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್ ತಿಲಕ್, ಡಾ. ಬಿ.ಆರ್.ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಜವಹರ್ ಲಾಲ್ ನೆಹರೂ, ಭಗತ್ ಸಿಂಗ್ ಸೇರಿದಂತೆ ಹಲವು ನೈಜ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದಲ್ಲಿವೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು.
ಅಲ್ಲದೆ ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರ ನಿರ್ವಹಿಸಲು ರಣದೀಪ್ ಹೂಡಾ (Randeep Hooda) ಸುಮಾರು 30 ಕೆಜಿ ಕಳೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಕಟ್ಟುಮಸ್ತಾದ ಶರೀರ ಹೊಂದಿದ್ದ ರಣದೀಪ್ ಹೂಡಾ ಅವರು ಸಾವರ್ಕರ್ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದರು. ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಫೋಸ್ ನೀಡಿದ್ದ ಫೋಟೊ ಇತ್ತೀಚೆಗೆ ವೈರಲ್ ಆಗಿತ್ತು.
ಇದನ್ನೂ ಓದಿ: Randeep Hooda: ಮಣಿಪುರದ ಮೈತಿ ಪದ್ಧತಿಯಂತೆ ವಿವಾಹವಾದ ಸ್ಟಾರ್ ನಟ; ಏನಿದರ ವಿಶೇಷ?
ಈ ಮಧ್ಯೆ ರಣದೀಪ್ ಹೂಡಾ (Randeep Hooda) ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಅವರಿಗೆ ಟಿಕೆಟ್ ನೀಡಲಿದೆ. ಹರಿಯಾಣದ ರೋಹ್ಟಕ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಣದೀಪ್ ಹೂಡಾ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ನಟಿ ಕಂಗನಾ ರಣಾವತ್ ಅವರಿಗೆ ಟಿಕೆಟ್ ನೀಡಿದ್ದು, ರಣದೀಪ್ ಹೂಡಾ ಅವರಿಗೂ ಪಕ್ಕಾ ಎನ್ನಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ