ಮುಂಬೈ: ಕಾಲ ಬದಲಾದಂತೆ ದೇಶದಲ್ಲಿ ಹೆಣ್ಣುಮಕ್ಕಳ ಮನಸ್ಥಿತಿ, ಜೀವನಶೈಲಿ, ತೆಗೆದುಕೊಳ್ಳುವ ನಿರ್ಧಾರಗಳೂ ಬದಲಾಗುತ್ತಿರುತ್ತವೆ. ಇದರಿಂದ ಪುರುಷರೂ ಹೊರತಾಗಿಲ್ಲ. ಅದರಲ್ಲೂ, ಇತ್ತೀಚೆಗೆ ಹೆಣ್ಣುಮಕ್ಕಳು ಮದುವೆ ಆಗದಿರುವುದು, ಮಕ್ಕಳು ಬೇಡ ಎನ್ನುವುದು ಸೇರಿ ಹಲವು ರೀತಿಯ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ದೇಶದಲ್ಲಿ “ಸ್ವಯಂ ಮದುವೆ” (Sologamy) ಅಂದರೆ, ತಮ್ಮನ್ನೇ ತಾವು ವರಿಸಿಕೊಳ್ಳುವ ಪದ್ಧತಿ ರೂಢಿಯಾಗಿದೆ. ಕೆಲ ತಿಂಗಳ ಹಿಂದೆ ಗುಜರಾತ್‌ನಲ್ಲಿ ಯುವತಿಯೊಬ್ಬಳು ಸ್ವಯಂ ಮದುವೆಯಾದ (Self Marriage) ಬೆನ್ನಲ್ಲೇ ಹಿಂದಿ ಕಿರುತೆರೆ ನಟಿ ಕನಿಷ್ಕಾ ಸೋನಿ ಅವರೂ ತಮ್ಮನ್ನೇ ತಾವು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ.
ದಿಯಾ ಔರ್ ಬಾತಿ ಹಮ್ (Diya Aur Baati Hum) ಧಾರಾವಾಹಿ ಖ್ಯಾತಿಯ ನಟಿ ಕನಿಷ್ಕಾ ಸೋನಿ ಅವರು ಸ್ವಯಂ ಮದುವೆಯಾಗಿದ್ದು, ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅವರೇ ಘೋಷಿಸಿದ್ದಾರೆ. ಹಾಗಾಗಿ, ಭಾರತದಲ್ಲಿ ಸ್ವಯಂ ಮದುವೆಯಾದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಕನಿಷ್ಕಾ ಖ್ಯಾತಿಯಾಗಿದ್ದಾರೆ. ಇದಕ್ಕೂ ಮೊದಲು ಜೂನ್ ೧೧ರಂದು ಕ್ಷಮಾ ಬಿಂದು ಎಂಬ ಯುವತಿಯು ತಮ್ಮನ್ನೇ ತಾವು ವರಿಸಿಕೊಂಡಿದ್ದರು.
“ನನಗೆ ಪುರುಷರ ಸಹವಾಸವೇ ಬೇಡ. ನಾನು ಎಂದಿಗೂ ಅವರನ್ನು ಬಯಸುವುದಿಲ್ಲ. ನನ್ನನ್ನು ನಾನೇ ಪ್ರೀತಿಸುತ್ತೇನೆ, ನನ್ನನ್ನು ನಾನೇ ಮದುವೆಯಾಗಿದ್ದೇನೆ” ಎಂದು ಕನಿಷ್ಕಾ ತಿಳಿಸಿದ್ದಾರೆ. ಆದಾಗ್ಯೂ, ಭಾರತದಲ್ಲಿ ಸ್ವಯಂ ಮದುವೆಯು ಕಾನೂನುಬದ್ಧವಲ್ಲ. ಕನಿಷ್ಕಾ ಸೋನಿ ಅವರು ದೇವೋಂ ಕೆ ದೇವ್, ಮಹಾದೇವ್, ಪವಿತ್ರ ರಿಶ್ತಾ ಸೇರಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ದೇವರಾಯ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.
ಇದನ್ನೂ ಓದಿ | ತನ್ನೊಂದಿಗೇ ತಾನು ಸಪ್ತಪದಿ ತುಳಿದ ಗುಜರಾತ್ ಯುವತಿ; ಭರ್ಜರಿಯಾಗೇ ನಡೀತು ವರನಿಲ್ಲದ ಮದುವೆ!