ಬೆಂಗಳೂರು: ನಿರ್ಮಾಪಕ ಉಮಾಪತಿ ಅವರ ಬಗ್ಗೆ ನಟ ದರ್ಶನ್ (Darshan) ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಎನ್ನುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chambe) ದೂರು ನೀಡಿದ್ದರು. ಇದೀಗ ಶಫಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದಾಖಲಿಸಿದ್ದ ದೂರನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ವಿಡಿಯೊ ಮೂಲಕ ಕನ್ನಡ ಶಫಿ ಅವರು ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಶಫಿ ಮಾತನಾಡಿ ʻʻನಮಸ್ಕಾರ, ನಾನು ಕನ್ನಡ ಶಫಿ. ಕರ್ನಾಟಕ ಪ್ರಜಾಪರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ. ಇವತ್ತು ನಾನು ನಿಮ್ಮ ಮುಂದೆ ಬಂದಿರುವ ಉದ್ದೇಶ ಏನೆಂದರೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವೇದಿಕೆಯಲ್ಲಿ ನಟ ದರ್ಶನ್ (Darshan) ಬಳಸಿರುವ ಪದಬಳಕೆಗಳು, ಮುಜುಗರಕ್ಕೆ ತಂದಿತ್ತು. ಹಾಗಾಗಿ ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೆವು. ನಾವು ಸಂಘಟನೆಯವರು ಸ್ವಲ್ಪ ಆತುರ ಮಾಡಿದ್ದೇವೆ ಎನಿಸುತ್ತದೆ. ಚಿತ್ರರಂಗದಲ್ಲಿ ಬೆಳೆದು ನಿಂತಿರುವ ಹಿರಿಯ ನಟನಿಗೆ ಇದರಿಂದ ನೋವಾಗಿದ್ದರೆ ನಮ್ಮ ಸಂಘಟನೆಗಳ ಪರವಾಗಿ ಕನ್ನಡದ ಮನಸ್ಸುಗಳಿಗೆ ಕ್ಷಮೆ ಯಾಚಿಸುತ್ತೇನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದಾಖಲಿಸಿದ್ದ ದೂರನ್ನು ಹಿಂಪಡೆಯುವುದಾಗಿʼʼ ಹೇಳಿದ್ದಾರೆ.
ಇದನ್ನೂ ಓದಿ: Actor Darshan: ಸ್ತ್ರೀಯರನ್ನು ಅವಮಾನಿಸಿರುವ ನಟ ದರ್ಶನ್ ಅರೆಸ್ಟ್ ಮಾಡಿ; ಠಾಣೆಗೆ ಮುತ್ತಿಗೆ ಹಾಕಿ ಮಹಿಳೆಯರ ದೂರು
ಕ್ಷಮೆ ಕೇಳಿದ ಶಫಿ
ದರ್ಶನ್ ಉಮಾಪತಿಗೆ ವಾರ್ನಿಂಗ್ ನೀಡಿದ್ದೇನು?
ಈ ಹಿಂದೆ ಉಮಾಪತಿ ಅವರು ಕಾಟೇರ ಟೈಟಲ್ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು.