Site icon Vistara News

Shah Rukh Khan : ಅತ್ಯುತ್ತಮ ನಟ ಪ್ರಶಸ್ತಿಗಾಗಿ ಲಂಚ ಕೊಡಲು ಮುಂದಾಗಿದ್ದ ಶಾರುಖ್‌! ವಿಡಿಯೊ ವೈರಲ್‌

shah rukh khan

ಮುಂಬೈ: ಶಾರುಖ್‌ ಖಾನ್‌ (Shah Rukh Khan) ಬಾಲಿವುಡ್‌ನಲ್ಲಿ 31 ವರ್ಷಗಳಿಂದ ಮಿಂಚುತ್ತಿರುವ ನಟ. ನಟನೆಯ ಮೂಲಕ ಜನರ ಪ್ರೀತಿಗೆ ಪಾತ್ರರಾಗಿರುವ ಅವರು 14 ಫಿಲ್ಮ್‌ಫೇರ್‌ ಪ್ರಶಸ್ತಿಗಳ ಜತೆ ಫ್ರಾನ್ಸ್‌ನ ಅತ್ಯುನ್ನತ ಪ್ರಶಸ್ತಿಯಾದ ನೈಟ್‌ ಆಫ್‌ ದಿ ಲೀಜನ್‌ ಅನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ಇದೇ ಶಾರುಖ್‌ ಖಾನ್‌ ಹಿಂದೊಮ್ಮೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪಡೆಯಬೇಕೆಂದು ಲಂಚ ಕೊಡುವುದಕ್ಕೂ ಸಿದ್ಧರಾಗಿಬಿಟ್ಟಿದ್ದರಂತೆ. ಈ ಬಗ್ಗೆ ಅವರು ಆಡಿದ್ದ ಮಾತುಗಳ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಹಳ ಹಿಂದೆ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಶಾರುಖ್‌ ಅವರು ತಮ್ಮ ಆ ಅನುಭವದ ಬಗ್ಗೆ ಮಾತನಾಡಿದ್ದರು. “ಒಬ್ಬ ವ್ಯಕ್ತಿಗೆ ಏನಾದರೂ ಬಯಕೆ ಇದ್ದಾಗ ಆತ ಅದನ್ನು ಪಡೆಯುವುದಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿದುಬಿಡುತ್ತಾನೆ. ನಾನು ಕೂಡ ಅದೇ ರೀತಿ ಮಾಡಿದ್ದೆ. ನಾನು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆಯಲೇಬೇಕು ಎಂದುಕೊಂಡಿದ್ದೆ. ಅದಕ್ಕೆ ನಾನು ಅರ್ಹ ಎಂದು ನಂಬಿದ್ದೆ. ಅದೇ ಕಾರಣಕ್ಕೆ ನಾನು ಸಂಪಾದಕರೊಬ್ಬರ ಬಳಿ ಹೋಗಿ ನನಗೇ ಪ್ರಶಸ್ತಿಯನ್ನು ಕೊಡಿ. ಅದಕ್ಕೆ ನಾನು ಹಣ ಕೊಡುತ್ತೇನೆ ಎಂದು ಹೇಳಿಬಿಟ್ಟಿದ್ದೆ. ಆದರೆ ಅವರು ಪ್ರಶಸ್ತಿಯನ್ನು ಹಾಗಲ್ಲ ಕೊಡಲಾಗುವುದಿಲ್ಲ, ಜನರು ವೋಟ್‌ ಹಾಕಿ ಯಾರನ್ನು ಆಯ್ಕೆ ಮಾಡುತ್ತಾರೋ ಅವರಿಗೇ ಪ್ರಶಸ್ತಿ ಕೊಡುವುದು ಎಂದು ಹೇಳಿ ಕಳುಹಿಸಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಹೆರಿಗೆ ನೋವಿಂದ ಆಸ್ಪತ್ರೆಗೆ ದಾಖಲಾದ ಮಗಳು; ಆಕೆಯ ಮಾವ-ಅತ್ತೆಗೆ ಥಳಿಸಿದ ಅಪ್ಪ-ಅಮ್ಮ!
ಆ ವರ್ಷ ನನಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಬಂದಿತು. ಆದರೆ ನಾನು ಹಣ ಕೊಡಲು ಮುಂದಾಗಿದ್ದಕ್ಕಲ್ಲ. ಜನರೇ ನನಗೆ ಮತ ಹಾಕಿ ನನ್ನನ್ನು ಅತ್ಯುತ್ತಮ ನಾಯಕ ನಟ ಎಂದು ಆಯ್ಕೆ ಮಾಡಿದ್ದರು ಎಂದು ಶಾರುಖ್‌ ಹೇಳಿದ್ದರು.

Srk talking about how he went to editor with cash to buy the award for best actor.
by u/sepiosexual in BollyBlindsNGossip


ಶಾರುಖ್‌ ಖಾನ್‌ ಅವರ ಈ ವಿಡಿಯೊ ರೆಡ್ಡಿಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ. ಮಾಡಿದ ತಪ್ಪನ್ನು ಮರೆ ಮಾಚದೆ ಹೇಳಿಕೊಂಡ ನಟನ ಬಗ್ಗೆ ಅಭಿಮಾನಿಗಳು ಮೆಚ್ಚುಗ ವ್ಯಕ್ತಪಡಿಸುತ್ತಿದ್ದಾರೆ. “ಇವರು ಹೃದಯದಿಂದಲೂ ನಾಯಕನೇ ಎನ್ನುವುದು ಇಂತಹ ಕಾರಣಗಳಿಗೇ” ಎಂದು ಜನರು ಕಾಮೆಂಟ್‌ಗಳಲ್ಲಿ ಹೇಳಲಾರಂಭಿಸಿದ್ದಾರೆ.

ಶಾರುಖ್‌ ಖಾನ್‌ ಅವರ ಪಠಾಣ್‌ ಸಿನಿಮಾ ವರ್ಷಾರಂಭದಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸನ್ನು ಕಂಡಿದೆ. ಸದ್ಯ ಅವರು ಜವಾನ್‌ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಅಟ್ಲೀ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಯನತಾರಾ, ವಿಜಯ್‌ ಸೇತುಪತಿ ಮತ್ತು ಸಾನ್ಯಾ ಮಲ್ಹೋತ್ರಾ ಅವರು ನಟಿಸಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಈಗಾಗಲೇ ಬಿಡುಗಡೆಯಾಗಿದ್ದು, ಜನರಲ್ಲಿ ಕುತೂಹಲವನ್ನು ಕೆರಳಿಸಿದೆ.

Exit mobile version