Site icon Vistara News

Shah Rukh Khan: ತಿರುಪತಿ ದೇವಸ್ಥಾನಕ್ಕೆ ಶಾರುಖ್‌ ಖಾನ್‌, ನಯನತಾರಾ ಭೇಟಿ, ಫ್ಲೈಯಿಂಗ್‌ ಕಿಸ್‌ ನೀಡಿದ ಬಾದ್‌ಶಾ

sharukh khan in tirupathi

ಬೆಂಗಳೂರು: ಬಾಲಿವುಡ್ ಬಾದ್‌ಶಾ, ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಮೊದಲ ಬಾರಿಗೆ ತಿರುಮಲ ತಿರುಪತಿ (Tirupati temple) ದೇವಸ್ಥಾನಕ್ಕೆ ಭೇಟಿ‌ ನೀಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನ ತಿರುಪತಿ ದೇವಾಲಯಕ್ಕೆ ಶಾರುಖ್‌ ಸಹಿತ ʼಜವಾನ್‌ʼ ಸಿನಿಮಾ (Jawan movie) ತಂಡ ಭೇಟಿ ನೀಡಿದೆ.

ಸೆಪ್ಟೆಂಬರ್ 7ರಂದು ಶಾರುಖ್‌ ಅವರ ನೂತನ ಚಿತ್ರ ʼಜವಾನ್ʼ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಒಂದರ ಹಿಂದೆ ಒಂದು ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದಾರೆ.

ಮಂಗಳವಾರ ಮುಂಜಾನೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾರುಖ್‌ ಜತೆಗೆ ಅವರ ಮಗಳು ಸುಹಾನಾ ಖಾನ್ (suhana khan) ಮತ್ತು ಜವಾನ್ ಸಹನಟಿ ನಯನತಾರಾ (nayanthara) ಕೂಡ ಇದ್ದರು. ನಯನತಾರಾ ಅವರ ಪತಿ, ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಕೂಡ ಜತೆಗಿದ್ದರು. ಬೆಳಿಗ್ಗೆ ಸುಪ್ರಭಾತ ಸಂದರ್ಭದಲ್ಲಿ ಪ್ರಥಮ ಪೂಜೆಗೆ ಹಾಜರಾಗಿ ಶ್ರೀ ವೆಂಕಟೇಶ್ವರ ದೇವರ ದರ್ಶನ ಪಡೆದರು.

ಹಿಂದಿ ಚಿತ್ರರಂಗದ ಖ್ಯಾತ ನಟ ಆಗಮಿಸಿದ ಸುದ್ದಿ ತಿಳಿಯುತ್ತಿದ್ದಂತೆ ಜನ ಅವರನ್ನು ನೋಡಲು ಮುಗಿಬಿದ್ದರು. ಶಾರುಖ್ ಖಾನ್ ಹಾಗೂ ನಯನತಾರ ಈ ಸಂದರ್ಭದಲ್ಲಿ ಯಾವುದೇ ಮಾಧ್ಯಮ ಹೇಳಿಕೆ ನೀಡಲು ನಿರಾಕರಿಸಿದರು.

ತಿರುಪತಿಯಲ್ಲಿ ಶಾರುಖ್ ಇರುವ ಚಿತ್ರಗಳು ಮತ್ತು ವೀಡಿಯೊಗಳು ಮಂಗಳವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಶಾರುಖ್ ಕ್ರೀಂ ಬಣ್ಣದ ಪಂಚೆ ಧರಿಸಿ, ಚಿಕ್ಕ ಕುರ್ತಾ ಮತ್ತು ಚಿನ್ನದ ಬಾರ್ಡರ್‌ ಇರುವ ಮ್ಯಾಚಿಂಗ್ ಶಾಲು ಧರಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದರು. ದೇವಸ್ಥಾನದ ಹೊರಗೆ ಭಕ್ತರಿಗೆ ಫ್ಲೈಯಿಂಗ್ ಕಿಸ್‌ ನೀಡಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಬಿಳಿ ಸಲ್ವಾರ್-ಕಮೀಜ್ ಧರಿಸಿದ ಸುಹಾನಾ ಖಾನ್ ತಮ್ಮ ತಂದೆಯ ಕೈ ಹಿಡಿದಿದ್ದರು. ದೇವರ ದರ್ಶನಕ್ಕಾಗಿ ನಯನತಾರಾ ಮತ್ತು ವಿಘ್ನೇಶ್ ಕೂಡ ಬಿಳಿ ಬಟ್ಟೆಗಳನ್ನು ಧರಿಸಿದ್ದರು.

ಈ ಹಿಂದೆ ಪಠಾಣ್ ಚಿತ್ರ ಬಿಡುಗಡೆಗೆ ಮುನ್ನ ಕೂಡ ಶಾರುಖ್‌ ಖಾನ್‌ ಟೆಂಪಲ್‌ ರನ್‌ ಮಾಡಿದ್ದರು. ಈ ವರ್ಷದ ಜನವರಿಯಲ್ಲಿ ಪಠಾಣ್ ಬಿಡುಗಡೆಯಾಗುವ ಮೊದಲು ಅವರು ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಕಳೆದ ತಿಂಗಳು ಶಾರುಖ್ ಖಾನ್ ಅವರು ಮತ್ತೆ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: Jawan Trailer: ಆಲಿಯಾ ಭಟ್‌ಗಾಗಿ ಬೇಡಿಕೆ ಇಟ್ಟ ವಿಲನ್‌ ಶಾರುಖ್‌; ʻಜವಾನ್‌ʼ ಖಡಕ್‌ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ!

Exit mobile version