ಮುಂಬೈ: ಡಾನ್ ಸೀರಿಸ್ ಒಂದು ರೀತಿಯಲ್ಲಿ ಶಾರುಖ್ (Shah Rukh Khan) ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ ಸಿನಿಮಾಗಳು ಎನ್ನಬಹುದು. ಅದೇ ರೀತಿಯಲ್ಲಿ ಇದೀಗ ಡಾನ್ 3 ಸಿನಿಮಾವನ್ನು ಮಾಡುವುದಕ್ಕೂ ಸಹ ಚಿತ್ರತಂಡ ಸಿದ್ಧವಾಗುತ್ತಿದೆ. ಆದರೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಶಾರುಖ್ ಮಾತ್ರ ಹಿಂದೇಟು ಹಾಕಿದ್ದು, ನಿರ್ಮಾಪಕರ ಸ್ಥಾನ ಹೊತ್ತಿರುವ ಫರ್ಹಾನ್ ಖಾನ್ ಅವರು ಬೇರೊಬ್ಬ ನಟನಿಗಾಗಿ ಹುಡುಕಾಟ ಮಾಡಬೇಕಾಗಿದೆ.
ಹೌದು. ಫರ್ಹಾನ್ ಅವರು ಡಾನ್ 3 ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಕ್ಸೆಲ್ ಎಂಟರೈನ್ಮೆಂಟ್‌ನಲ್ಲಿ ಅವರ ಪಾಲುದಾರರಾಗಿರುವ ನಿರ್ಮಾಪಕ ರಿತೇಶ್ ಸಿಧ್ವಾನಿ ತಿಳಿಸಿದ್ದರು. ಅದರ ಬೆನ್ನಲ್ಲೇ ಇದೀಗ ಶಾರುಖ್ ಅವರು ಡಾನ್ 3 ಮಾಡುವುದಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಚಾರ ವರದಿಯಾಗಿದೆ.
ಇದನ್ನೂ ಓದಿ: Shah Rukh Khan : ಶಾರುಖ್ ಖಾನ್ ಪತ್ನಿ ಗೌರಿ ವಿನ್ಯಾಸಕಿ ಆಗಿದ್ದು ಏಕೆ? ಕಷ್ಟದ ದಿನಗಳನ್ನು ತೆರೆದಿಟ್ಟ ನಟ
ಪಠಾಣ್ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿರುವ ಶಾರುಖ್ ಅಂತಾರಾಷ್ಟ್ರೀಯ ಮಟ್ಟದಲ್ಲೇ ಸಿನಿಮಾ ಮಾಡಲು ಬಯಸುತ್ತಿದ್ದಾರೆ. ಈ ಡಾನ್ 3 ಸಿನಿಮಾ ಶಾರುಖ್ ಅವರ ನಿರೀಕ್ಷೆಗೆ ಸರಿಹೊಂದುವ ಸಿನಿಮಾವಲ್ಲ ಎನ್ನಲಾಗಿದೆ. ಅದೇ ಕಾರಣಕ್ಕೆ ಶಾರುಖ್ ಈ ಸಿನಿಮಾ ಮಾಡುವುದಕ್ಕೆ ಒಪ್ಪಿಲ್ಲ ಎಂದೂ ವರದಿ ಹೇಳಿದೆ.
ಅಂದ ಹಾಗೆ ಈ ಸಿನಿಮಾದಲ್ಲಿ ಒಟ್ಟು ಮೂರು ತಲೆಮಾರಿನ ಹೀರೋಗಳನ್ನು ಬಳಸಿಕೊಳ್ಳುವುದಕ್ಕೆ ಫರ್ಹಾನ್ ಯೋಜನೆ ಹಾಕಿಕೊಂಡಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಮತ್ತು ಈಗಿನ ತಲೆಮಾರಿನ ನಟರೊಬ್ಬರನ್ನು ಬಳಸಿಕೊಂಡು ಸಿನಿಮಾ ಮಾಡುವ ಯೋಜನೆಯಿತ್ತು. ಆದರೆ ಇದೀಗ ಶಾರುಖ್ ಆ ಯೋಜನೆಯಿಂದ ಹೊರಗುಳಿದಿರುವ ಹಿನ್ನೆಲೆ ಫರ್ಹಾನ್ ಶಾರುಖ್ ತಲೆಮಾರಿನ ಮತ್ತೊಬ್ಬ ಹೀರೋಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಫರ್ಹಾನ್ ಅವರ ಸಂಸ್ಥೆಯಲ್ಲಿ ಎರಡು ಸಿನಿಮಾಗಳನ್ನು ಮಾಡಿರುವ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Shah Rukh Khan: ಮತ್ತೆ ಶೂಟಿಂಗ್‌ನಲ್ಲಿ ಬ್ಯುಸಿಯಾದ್ರಾ ಶಾರುಖ್? ಫೋಟೊ ವೈರಲ್
ಸದ್ಯ ಫರ್ಹಾನ್ ಅವರು ʼಜೀ ಲೇ ಜರಾʼ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ನ ಪ್ರಸಿದ್ಧ ನಟಿಯರಾದ ಅಲಿಯಾ ಭಟ್, ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷದ ಅಂತ್ಯಕ್ಕೆ ತೆರೆ ಕಾಣುವ ಸಾಧ್ಯತೆಯಿದೆ.