ಬೆಂಗಳೂರು : ಶಾರುಖ್ ಖಾನ್ (Shahrukh Khan) ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರದ ‘ಬೇಷರಮ್ ರಂಗ್’ ಹಾಡು ಬಿಡುಗಡೆಯಾದಾಗಿನಿಂದ, ವಿವಾದವನ್ನು ಹುಟ್ಟುಹಾಕಿದೆ. ಸಿನಿಮಾದ ‘ಬೇಷರಮ್ ರಂಗ್’ ಹಾಡು ಹಿಂದುಗಳ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ಹಾಡಿನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ದೀಪಿಕಾ ಪಡುಕೋಣೆ ಅವರು ಧರಿಸಿರುವ ವೇಷಭೂಷಣಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ʻʻದೀಪಿಕಾ ಪಡುಕೋಣೆ ಅವರ ಉಡುಪುಗಳು ಆಕ್ಷೇಪಾರ್ಹವಾಗಿದ್ದು, ಅದನ್ನು ಸರಿಪಡಿಸಬೇಕು ಅಥವಾ ಚಲನಚಿತ್ರ ಬಿಡುಗಡೆಗೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಹಾಡಿನಲ್ಲಿ ಧರಿಸಿರುವ ವೇಷಭೂಷಣಗಳು ತೀವ್ರ ಆಕ್ಷೇಪಾರ್ಹವಾಗಿವೆ. ಹಾಡನ್ನು ತಪ್ಪು ಉದ್ದೇಶದಿಂದ ಚಿತ್ರೀಕರಿಸಲಾಗಿದೆ. ವೇಷಭೂಷಣ ಮತ್ತು ದೃಶ್ಯಗಳನ್ನು ಸರಿಪಡಿಸಬೇಕು ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನಿಡುವುದಿಲ್ಲʼʼ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Shahrukh Khan | ʻಪಠಾಣ್ʼ ಸಿನಿಮಾ ಸಾಂಗ್ ಔಟ್: ಸಖತ್ ಹಾಟ್ ಆಗಿ ಮಿಂಚಿದ ದೀಪಿಕಾ ಪಡುಕೋಣೆ!
‘ಬೇಷರಮ್ ರಂಗ್’ ಹಾಡಿನಲ್ಲಿ ದೀಪಿಕಾ ಕೇಸರಿ ಬಟ್ಟೆ ತೊಟ್ಟು ಕುಣಿದಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ‘ಪಠಾಣ್’ ಸಿನಿಮಾ ವಿರುದ್ಧ ನೆಟ್ಟಿಗರು ರೊಚ್ಚಿಗೆದ್ದಿದ್ದು, ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ. ಕೇಸರಿಯ ಬಿಕಿನಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಈ ಕಾರಣದಿಂದಾಗಿ ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಕರೆ ನೀಡುತ್ತಿದ್ದಾರೆ.
ಏನಿದು ‘ಬೇಷರಮ್ ರಂಗ್’?
‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಎಂತಲೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್ ಅಭಿಯಾನ: ʻಪಠಾಣ್ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?