ಬೆಂಗಳೂರು : ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan ) ಮೆಕ್ಕಾಗೆ ಭೇಟಿ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ತನ್ನ ಭದ್ರತಾ ಸಿಬ್ಬಂದಿಯಿಂದ ಸುತ್ತುವರಿದು ದೇವಸ್ಥಾನದ ಕಡೆಗೆ ಹೋಗುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʻಪಠಾಣ್ʼ ಚಿತ್ರ ಬಿಡುಗಡೆಗೆ ಮುನ್ನ, ವಾರಾಂತ್ಯದಲ್ಲಿ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ವರದಿ ಆಗಿದೆ.
ಸೌದಿ ಅರೇಬಿಯಾದಲ್ಲಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ. ಇದನ್ನು ಮುಗಿಸಿಕೊಂಡು ಬಾಲಿವುಡ್ ನಟ ಶಾರುಖ್ ಖಾನ್ ಅವರು ಮೆಕ್ಕಾ ಕಡೆಗೆ ಮುಖ ಮಾಡಿದ್ದರು. ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನದಲ್ಲಿ SRK ದೇಗುಲದ ಕಡೆಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ | Actor Shahrukh Khan | ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶಾರುಖ್ ಖಾನ್‌ರನ್ನು ತಡೆದಿದ್ದೇಕೆ?
ಶಾರುಖ್ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದಂತೆ ಸೌಧಿ ಅರೇಬಿಯಾದಿಂದ ವಿವಿಧ ಫೋಟೊಗಳು ಮತ್ತು ವಿಡಿಯೊಗಳು ಔಟ್ ಆಗಿವೆ. ಹೊಸ ವಿಡಿಯೊ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಛಾಯಾಗ್ರಾಹಕನಿಗೆ ಯಾವುದೇ ಚಿತ್ರಗಳನ್ನು ತೆಗೆಯದಂತೆ ಕೇಳುತ್ತಿರುವುದು ಸೆರೆಯಾಗಿದೆ. ವಿಡಿಯೊದಲ್ಲಿ ಶಾರುಖ್ ಅವರು ಕಪ್ಪು ಬಣ್ಣದ ಜಾಕೆಟ್ ಧರಿಸಿಕೊಂಡಿದ್ದರು. ಹಾಗೂ ನಟ ಶಾರುಖ್ ಅವರ ಮುಖ ಸ್ಪಷ್ಟವಾಗಿ ಕಂಡಿಲ್ಲ.
2018ರಲ್ಲಿ ʻಜೀರೋ’ ಚಿತ್ರ ತೆರೆಕಂಡ ಬಳಿಕ ಶಾರುಖ್ ಖಾನ್ ʻಪಠಾಣ್ʼ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾ ಶೀಘ್ರವೇ ತೆರೆಗೆ ಬರಲಿದ್ದು, ಇದೊಂದು ಅದ್ಧೂರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಎಂಟು ವಿವಿಧ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಜಾನ್ ಅಬ್ರಾಹಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 25, 2023ಕ್ಕೆ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಾಗಿ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Hombale Films | ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾ ನಿರ್ಮಾಣ ಮಾಡಲಿದೆಯಂತೆ ಹೊಂಬಾಳೆ ಫಿಲ್ಮ್ಸ್!