ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ತಾಯಿ ಶರ್ಮಿಳಾ ಠಾಗೋರ್ (Sharmila Tagore) ಮತ್ತು ತಂದೆ ಮನ್ಸೂರ್ ಅಲಿ ಖಾನ್ ಪತೌಡಿ ಪ್ರೀತಿಸಿ ಮದುವೆಯಾದವರು. ಬೇರೆ ಬೇರೆ ಧರ್ಮದವರಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರಿಗೆ ಮದುವೆ ಸಮಯದಲ್ಲಿ ಸಾಕಷ್ಟು ಬೆದರಿಕೆಗಳೂ ಬಂದಿದ್ದವಂತೆ. ಈ ಬಗ್ಗೆ ಹಿರಿಯ ನಟಿ ಶರ್ಮಿಳಾ ಅವರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: Actor Saif Ali Khan | ಕರೀನಾ-ಸೈಫ್ ಅಲಿ ಖಾನ್ ಪುತ್ರ ತೈಮೂರ್ ಪ್ರೀಬರ್ತ್‌ಡೇ ಫೋಟೊ ವೈರಲ್!
ಸಂದರ್ಶನವೊಂದರಲ್ಲಿ ಮಾತನಾಡಿರುವ ಶರ್ಮಿಳಾ, “ನಾನು ಮತ್ತು ಮನ್ಸೂರ್ 1968ರಲ್ಲಿ ಕಲ್ಕತ್ತಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟೆವು. ನಾವಿಬ್ಬರೂ ಮದುವೆ ಆಗಬೇಕೆಂದುಕೊಂಡಿದ್ದೇವೆಂದು ನಮ್ಮಿಬ್ಬರ ಕುಟುಂಬಕ್ಕೆ ಹೇಳಿದೆವು. ಎರಡೂ ಕುಟುಂಬ ಖುಷಿಯಿಂದ ಒಪ್ಪಿಕೊಂಡಿತು. ಆದರೆ ಮದುವೆ ಸಮಯದಲ್ಲಿ ನನ್ನ ತಂದೆ ತಾಯಿಗೆ ಮತ್ತು ಮನ್ಸೂರ್ ತಂದೆ ತಾಯಿಗೆ ಟೆಲಿಗ್ರಾಂ ಮೂಲಕ ಬೆದರಿಕೆ ಬರಲಾರಂಭಿಸಿದವು. ಮದುವೆ ನಡೆದರೆ ಬುಲೆಟ್‌ಗಳು ಮಾತನಾಡುತ್ತವೆ ಎಂದು ಬೆದರಿಕೆ ಹಾಕಲಾಯಿತು. ಈ ವಿಚಾರದಲ್ಲಿ ಮನ್ಸೂರ್ ಕುಟುಂಬ ಹೆದರಿತ್ತು. ಆದರೆ ನಾವು ಅದರತ್ತ ಗಮನ ಕೊಡದೆ ಮದುವೆಯಾದೆವು” ಎಂದು ಹೇಳಿದ್ದಾರೆ.
ಮದುವೆಯಾದ ಮೇಲೆ ನಾವು ದೆಹಲಿಯಿಂದ ಮುಂಬೈಗೆ ಬಂದೆವು. ಅವರು ಅವರ ಕ್ರಿಕೆಟ್ ಜೀವನವನ್ನು ಮುಂದುವರಿಸಿದರು ಮತ್ತು ನಾನು ನನ್ನ ಸಿನಿಮಾ ಕೆಲಸ ಮುಂದುವರಿಸಿದೆನು. ನಮಗೆ ಯಾವುದೇ ತೊಂದರೆಯೂ ಇರಲಿಲ್ಲ. ಆದರೆ ನಮ್ಮಿಬ್ಬರ ಕುಟುಂಬ ಇನ್ನೂ ಭಯದಲ್ಲೇ ಇತ್ತು. ಮುಂಬೈನಲ್ಲಿ ಒಮ್ಮೆ ಇಬ್ಬರು ವ್ಯಕ್ತಿಗಳು ನಮ್ಮನ್ನು ಭೇಟಿಯಾದರು. “ನಾವು ದೆಹಲಿಯಿಂದ ಬಂದಿದ್ದೇವೆ. ಸಿಬಿಐನವರು ನಾವು. ನಿಮಗೇನಾದರೂ ಭದ್ರತೆ ಬೇಕಿದೆಯೇ?” ಎಂದು ಕೇಳಿದರು. ಆದರೆ ಅದರ ಅವಶ್ಯಕತೆ ನಮಗಿಲ್ಲ ಎಂದು ಹೇಳಿ ಅವರನ್ನು ವಾಪಸು ಕಳಿಸಿದೆವು ಎಂದು ಹಿರಿಯ ನಟಿ ನೆನಪು ಮಾಡಿಕೊಂಡಿದ್ದಾರೆ.
ಶರ್ಮಿಳಾ ಮತ್ತು ಮನ್ಸೂರ್ ಅವರಿಗೆ ಮೂರು ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಅವರ ಇಬ್ಬರು ಸಹೋದರಿಯರು ಮುಂಬೈನಲ್ಲೇ ವಾಸವಿದ್ದಾರೆ. 2011ರಲ್ಲಿ ಮನ್ಸೂರ್ ನಿಧನರಾಗಿದ್ದಾರೆ. ಶರ್ಮಿಳಾ ಅವರು ದೆಹಲಿಯ ಹೊರವಲಯದಲ್ಲಿರುವ ಮನ್ಸೂರ್ ಅವರ ಪೂರ್ವಿಕರ ಮನೆ ʼಪಟೌಡಿ ಹೌಸ್ʼನಲ್ಲಿ ವಾಸವಿದ್ದಾರೆ.