Site icon Vistara News

Shatrughan Sinha: ಮುಸ್ಲಿಂ ಯುವಕನ ಜತೆ ಮಗಳ ವಿವಾಹ; ನಟ ಶತ್ರುಘ್ನ ಸಿನ್ಹಾ ಪ್ರತಿಕ್ರಿಯೆ ಏನು?

Shatrughan Sinha

Shatrughan Sinha

ಮುಂಬೈ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ತಮ್ಮ ಬಾಯ್‌ಫ್ರೆಂಡ್‌, ನಟ ಜಹೀರ್ ಇಕ್ಬಾಲ್ (Zaheer Iqbal) ಜತೆ ಜೂನ್ 23ರಂದು ದಕ್ಷಿಣ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಜೋಡಿ ಎಲ್ಲಿಯೂ ತಮ್ಮ ಮದುವೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಈ ಮಧ್ಯೆ ಮಗಳ ಮದುವೆ ಬಗ್ಗೆ ಮಾತನಾಡಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ (Shatrughan Sinha) ಅವರು, ʼʼಮದುವೆ ಬಗ್ಗೆ ಸೋನಾಕ್ಷಿ ತಮ್ಮ ಬಳಿ ಏನನ್ನೂ ಹೇಳಿಕೊಂಡಿಲ್ಲ. ಇಂದಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡುತ್ತಾರೆ. ಒಂದು ವೇಳೆ ಅವಳು ಆಮಂತ್ರಿಸಿದರೆ ಖಂಡಿತವಾಗಿಯೂ ತೆರಳಿ ಆಶೀರ್ವದಿಸುತ್ತೇನೆʼʼ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ʼʼನಾನೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದೆ. ನನ್ನ ಮಗಳ ಬಗ್ಗೆ, ಅವಳ ಯೋಜನೆಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ಎಂದಿಗೂ ನಾವು ಬಯಸುತ್ತೇವೆʼʼ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋನಾಕ್ಷಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದೂ ಶತ್ರುಘ್ನ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ʼʼನಮ್ಮ ಮಗಳ ನಿರ್ಧಾರ ಯಾವತ್ತೂ ಸರಿಯಾಗಿರುತ್ತದೆ ಎನ್ನುವ ವಿಶ್ವಾಸವಿದೆ. ಅವಳು ಎಂದಿಗೂ ಸಂವಿಧಾನೇತರ ಅಥವಾ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವಳು ಪ್ರಬುದ್ಧೆಯಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆʼʼ ಎಂದು ಅವರು ತಿಳಿಸಿದ್ದಾರೆ.

ಸೋನಾಕ್ಷಿ ಹಾಗೂ ಜಹೀರ್ ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರೂ ಪ್ರೀತಿ ವಿಚಾರವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಇವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇವರು ಈಗ ವಿವಾಹ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೂ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋನಾಕ್ಷಿ 2010ರಲ್ಲಿ ಸಲ್ಮಾನ್‌ ಖಾನ್‌ ಅಭಿನಯದ ʻದಬಾಂಗ್‌ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೆ, ಜಹೀರ್ ಅವರ ಮೊದಲ ಚಿತ್ರ 2019ರಲ್ಲಿ ತೆರೆ ಕಂಡ ʻನೋಟ್‌ಬುಕ್ʼ. ಇತ್ತೀಚೆಗೆ ತೆರೆಕಂಡ ʻಡಬಲ್ ಎಕ್ಸ್‌ಎಲ್‌ʼ ಸಿನಿಮಾದಲ್ಲಿ ಜಹೀರ್ ಹಾಗೂ ಸೋನಾಕ್ಷಿ ಸಿನ್ಹಾ ಒಟ್ಟಿಗೆ ನಟಿಸಿದ್ದರು.

ಇದನ್ನೂ ಓದಿ: Sonakshi Sinha : ಪ್ರೀತಿಯಲ್ಲಿ ಬಿದ್ದ ಸೋನಾಕ್ಷಿ, ಲವ್‌ ಯು ಎಂದು ಪೋಸ್ಟ್‌ ಹಾಕಿದ ಬಾಯ್‌ಫ್ರೆಂಡ್‌ ಯಾರು ನೋಡಿ!

ಈ ಹಿಂದೆ ಬಿಜೆಪಿಯಲ್ಲಿದ್ದ ಶತ್ರುಘ್ನ ಸಿನ್ಹಾ ಕೆಲವು ವರ್ಷಗಳ ಹಿಂದೆ ಹೊರ ಬಂದಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದ ಅಸೋಲ್‌ ಕ್ಷೇತ್ರದಿಂದ ಟಿಎಂಸಿಯಿಂದ ಸ್ಪರ್ಧಿಸಿ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾ ವಿರುದ್ಧ 59,564 ಮತಗಳ ಅಂತರದಿಂದ ಗೆದ್ದಿದ್ದಾರೆ.

Exit mobile version