Site icon Vistara News

Shefali Shah : ʼಟಿವಿಯಲ್ಲಿ ಚೆನ್ನಾಗಿ ಕಾಣ್ತೀರ, ಆದರೆ…ʼ ಕೆಟ್ಟ ಅನುಭವಗಳ ಬಗ್ಗೆ ಮೌನ ಮುರಿದ ಶೆಫಾಲಿ ಶಾ

#image_title

ಮುಂಬೈ: ನಟಿ ಶೆಫಾಲಿ ಶಾ (Shefali Shah) ಅವರು ಹಲವಾರು ಸಿನಿಮಾಗಳು ಹಾಗೂ ವೆಬ್‌ ಸೀರಿಸ್‌ಗಳ ಮೂಲಕ ಜನರಿಗೆ ಹತ್ತಿರವಾದವರು. ಅದ್ಭುತ ಪ್ರತಿಭೆಯ ಮೂಲಕ ಅನೇಕರ ಮೆಚ್ಚುಗೆ ಪಡೆದುಕೊಂಡವರು. ಆದರೆ ಇದೇ ನಟಿ ಹಲವಾರು ಮಂದಿಯಿಂದ ಟೀಕೆಗೇ ಒಳಗಾಗಬೇಕಾಗಿ ಬಂದಿದೆಯಂತೆ. ಜನರು ನೇರವಾಗಿಯೇ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡುವ ಬಗ್ಗೆ ನಟಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿದ್ದಾರೆ.

ಶೆಫಾಲಿ ಅವರು ವಿಮಾನದೊಳಗೆ ತಾವು ನಿದ್ರೆ ಮಾಡುತ್ತಿರುವ ಫೋಟೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಅವರು ಬಹುದೊಡ್ಡ ಕ್ಯಾಪ್ಶನ್‌ ಅನ್ನೂ ಕೊಟ್ಟಿದ್ದಾರೆ. “ವಿಮಾನದಲ್ಲಿ ಪ್ರಯಾಣಿಸುವಾಗ ಗಗನಸಖಿ ನನ್ನ ಬಳಿ ಬಂದು ತಿಂಡಿಯ ಆರ್ಡರ್‌ ತೆಗೆದುಕೊಂಡು ಹೋದರು. ಆಗ ಅವರು ಪಕ್ಕದ ಸೀಟಿನಲ್ಲಿ ಏನನ್ನೂ ಇಡಬೇಡಿ. ಇಟ್ಟರೆ ಅದು ಬಿದ್ದುಹೋಗಬಹುದು ಎಂದು ಸಲಹೆಯನ್ನೂ ಕೊಟ್ಟರು. ಹಾಗೆ ಹೋದ ಅವರು ಕೆಲ ಸಮಯವಾದ ಮೇಲೆ ನನ್ನ ಬಳಿ ಮತ್ತೆ ಬಂದರು. ಹಾಗೆ ಬಂದ ಅವರು ನನ್ನ ಕೆಲಸಗಳ ಬಗ್ಗೆ ಪ್ರಶಂಶಿಸಿ ಹೋದರು” ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ 66ಕೆಜಿ ಬೆಳ್ಳಿವಸ್ತುಗಳು ಬಾಲಿವುಡ್ ಖ್ಯಾತ ನಿರ್ಮಾಪಕನಿಗೆ ಸೇರಿದ್ದು!
“ಗಗನಸಖಿ ಮತ್ತೆ ಮೂರನೇ ಬಾರಿಗೆ ನನ್ನ ಬಳಿ ಬಂದರು. ʼನಾನು ಮತ್ತು ಬೇರೆ ಸಿಬ್ಬಂದಿ ನಿಮ್ಮನ್ನು ಗುರುತಿಸಲೇ ಆಗಲಿಲ್ಲ. ನೀವು ಪರದೆಯ ಮೇಲೆ ಕಾಣುವುದಕ್ಕಿಂತ ವಿಭಿನ್ನವಾಗಿ ಕಾಣುತ್ತೀರಿ, ಆದರೆ ನಿಮ್ಮ ಕೆಲಸವನ್ನು ನಾವು ಪ್ರೀತಿಸುತ್ತೇವೆ.ʼ ಎಂದು ಹೇಳಿದರು. ಆದರೆ ಇದು ಮೆಚ್ಚುಗೆಯೋ ಸಹಾನುಭೂತಿಯೋ ಎನ್ನುವ ವಿಚಾರ ನನಗೆ ಗೊತ್ತಾಗಲೇ ಇಲ್ಲ” ಎಂದು ಅವರು ಹೇಳಿದ್ದಾರೆ.‌

ಮಾತು ಮುಂದುವರಿಸಿದ ನಟಿ, “ತಿಂಡಿ ತಂದಾಗ ಗಗನಸಖಿ ನಗುತ್ತಾ, ನನ್ನನ್ನು ಔದಾರ್ಯದಿಂದ ಕಂಡರು. ಬಹುಶಃ ಅವರು ನನ್ನ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ತೋರುತ್ತಿದ್ದಾರೆ ಎಂದು ಆಗ ನನಗನಿಸಿತು.” ಎಂದು ಹೇಳಿದ್ದಾರೆ. ಈ ರೀತಿಯ ಅನುಭವ ಇದೇ ಮೊದಲಲ್ಲ ಎಂದು ನಟಿ ಹೇಳಿದ್ದಾರೆ.

“ಇದು ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಜನರು ನನ್ನನ್ನು ನಿರ್ಧರಿಸುವಂತಹ ಮಾತುಗಳನ್ನಾಡಿದ್ದಾರೆ. ಅದನ್ನು ನಾನು ಎದುರಿಸಿದ್ದೇನೆ. ಒಮ್ಮೆ ಒಬ್ಬ ವ್ಯಕ್ತಿ ನನಗೆ ʼಟಿವಿಯಲ್ಲಿ ಚೆನ್ನಾಗಿ ಕಾಣುತ್ತೀರಿʼ ಎಂದು ಹೇಳಿ ನಿಜವಾಗಿ ಚೆನ್ನಾಗಿ ಕಾಣುವುದಿಲ್ಲ ಎಂದು ಹೇಳಿದ್ದರು. ನಾನು ಪರದೆ ಮೇಲೆ ಬೇರೆ ರೀತಿ ಕಾಣಿಸಿಕೊಳ್ಳುವ ಮೂಲಕ ಜನರನ್ನು ಯಾಮಾರಿಸುತ್ತೇನೆ ಎಂದೂ ಹೇಳುತ್ತಾರೆ. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಒಂದು ಆದರೆ ಬಂದಿದ್ದೇ ಒಂದು ಎನ್ನುವಂತೆ ನನ್ನ ಬಗ್ಗೆ ಮಾತನಾಡುತ್ತಾರೆ” ಎಂದು ಅವರು ಹೇಳಿದ್ದಾರೆ.


“ಅದೇನೇ ಆಗಲಿ ನಾನು ಕೋಪಗೊಳ್ಳುವುದಿಲ್ಲ. ನಾನೇನು ಪರಿಪೂರ್ಣಳಾಗಿಯೇ ಎದ್ದೇಳುವುದಿಲ್ಲ. ನಾನು ನೀವೆಂದುಕೊಂಡಿರುವ ಆಕೃತಿ ಅಥವಾ ಚಿತ್ರಕಲೆಯಲ್ಲ. ನಾನು ಇದ್ದಂತೆ ಇದ್ದೇನೆ. ನಾನು ರಿಯಲ್‌” ಎಂದು ನಟಿ ಗಟ್ಟಿಯಾಗಿ ಹೇಳುತ್ತಾ ತಮ್ಮ ಅನುಭವವನ್ನು ಮುಗಿಸಿದ್ದಾರೆ. ಶೆಫಾಲಿ ಅವರು ಕಳೆದ ವರ್ಷ ದೆಹಲಿ ಕ್ರೈಮ್ 2 ಮತ್ತು ಡಾರ್ಲಿಂಗ್ಸ್ ಸೇರಿದಂತೆ ಮೂರು ಚಲನಚಿತ್ರಗಳು ಮತ್ತು ಎರಡು ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡರು. ಅದಷ್ಟೇ ಅಲ್ಲದೆ ಹ್ಯೂಮನ್ ಎಂಬ ವೆಬ್ ಶೋ ಮತ್ತು ಜಲ್ಸಾ ಮತ್ತು ಡಾಕ್ಟರ್ ಜಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Exit mobile version