ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್ʼ ಸಿನಿಮಾ ಟೀಸರ್ ಬಿಡುಗಡೆ ಬೆನ್ನಲ್ಲೆ ಕೆ.ಡಿ ಸಿನಿಮಾ ಬಗ್ಗೆ ಮತ್ತೆ ಸುದ್ದಿಯಾಗುತ್ತಿದೆ. ಇದೀಗ ಬಾಲಿವುಡ್ ಬೆಡಗಿ, ಕನ್ನಡತಿ ಶಿಲ್ಪಾ ಶೆಟ್ಟಿಯವರ ಹೆಸರು ಕೇಳಿಬರುತ್ತಿದೆ. 1998ರಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದರು. ಆನಂತರ ಮತ್ತೆ ರವಿಚಂದ್ರನ್ ಜತೆ ʻಒಂದಾಗೋಣ ಬಾʼ ಚಿತ್ರದಲ್ಲಿ ನಟಿಸಿದರು. 2005ರಲ್ಲಿ ಉಪೇಂದ್ರ ಜತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದರು. ಇದೀಗ ಕ್ರೇಜಿ ಸ್ಟಾರ್ ರವಿಚಂದ್ರನ್ ಜತೆ ಶಿಲ್ಪಾ ಶೆಟ್ಟಿ ನಾಯಕಿಯಾಗಿ ಮತ್ತೊಮ್ಮೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್ ಈ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶಿಲ್ಪಾ ಶೆಟ್ಟಿ ಜತೆ ಮಾತುಕತೆ ಕೂಡ ಆಡಿದ್ದಾರಂತೆ ಪ್ರೇಮ್. 20 ವರ್ಷಗಳ ಬಳಿಕ ರವಿಚಂದ್ರನ್ಗೆ ಪುನಃ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಇದೆ.
ಇದನ್ನೂ ಓದಿ: Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ʻಮಾರ್ಟಿನ್ʼ ಟೀಸರ್ ಔಟ್
ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.