ಬೆಂಗಳೂರು: ಶಿಲ್ಪಾ ಶೆಟ್ಟಿ (Shilpa Shetty) 30 ವರ್ಷಗಳ ಹಿಂದೆ ಬಿಡುಗಡೆಯಾದ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ʼಬಾಜಿಗರ್ʼ (1993) (Baazigar) ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. 2009ರಲ್ಲಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾದರು. 2012ರಲ್ಲಿ ಮಗ ಹುಟ್ಟಿದ. 2020ರಲ್ಲಿ, ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದರು.ʻ ದಿ ಗ್ರೇಟ್ ಇಂಡಿಯನ್ ಡಯಟ್ʼ (The Great Indian Diet ) ಮತ್ತು ʻದಿ ಡೈರಿ ಆಫ್ ಎ ಡೊಮೆಸ್ಟಿಕ್ ದಿವಾʼ (The Diary Of A Domestic Diva) ಎಂಬ ಎರಡು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಶಿಲ್ಪಾ ಶೆಟ್ಟಿ ನಟಿ ಮಾತ್ರವಲ್ಲ, ಯಶಸ್ವಿ ಉದ್ಯಮಿಯೂ ಹೌದು. ಈ ರೀತಿಯ ಸಮತೋಲನದ ತಮ್ಮ ಜೀವನ ಶೈಲಿಗೆ ಪತಿ ರಾಜ್ ಕುಂದ್ರಾಗೆ (Raj Kundra) ಕಾರಣವೆಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂದ ಹಾಗೆ, ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿ ರಾಜ್ ಕುಂದ್ರಾ ಅವರನ್ನು ಪೊಲೀಸರು ಜೈಲಿಗಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಪ್ರಕರಣದ ಬಳಿಕ ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾರಿಂದ ದೂರ ಆಗಬಹುದು ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಗೆ ವ್ಯತಿರಿಕ್ತವಾಗಿ ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿಯನ್ನು ಹಾಡಿ ಹೊಗಳಿದ್ದಾರೆ.
ಸಿನಿಮಾ ಜತೆಗೆ ಹೆಚ್ಚಾಗಿ ಕುಟುಂಬಕ್ಕೆ ನಟಿ ಆದ್ಯತೆ ನೀಡುತ್ತ ಬರುತ್ತಿದ್ದಾರೆ. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಸಾಧಿಸುವಲ್ಲಿ ನಟಿ ಯಶಸ್ವಿಯಾಗಿದ್ದಾರೆ. ಮಾಧ್ಯಮವೊಂದರ ವಿಶೇಷ ಚಾಟ್‌ನಲ್ಲಿ ನಟಿ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ʻʻನನ್ನ ಪತಿ ಮತ್ತು ನನ್ನ ಸುತ್ತಮುತ್ತಲಿನ ಜನರ ಪ್ರೋತ್ಸಾಹದಿಂದ ಹಲವು ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಯಿತು. ನನ್ನ ತಾಯಿಯಿಂದ ಸಾಕಷ್ಟು ವಿಷಯಗಳನ್ನು ಕಲಿತು, ನಾನು ಬೆಳೆದಿದ್ದೇನೆ. ಆದ್ದರಿಂದ ಕೆಲಸದಲ್ಲಿ ಇರುವಂತಹ ಗೌರವ ಅವರಿಂದಲೇ ನನಗೆ ಬಂದದ್ದುʼʼ ಎಂದು ಹೇಳಿಕೊಂಡಿದ್ದಾರೆ.
ʻʻನಾನು ಹಾಗೂ ನನ್ನ ತಂಗಿ ಶಮಿತಾ ತುಂಬ ಸ್ವತಂತ್ರವಾಗಿ ಬೆಳೆದಿದ್ದೇವೆ. ಅದರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ನನಗೆ ಈಗ ಮಗಳಿದ್ದಾಳೆ. ಅವಳು ಕೂಡ ಹಾಗೆಯೇ ಇರಬೇಕೆಂದು ನಾನು ಬಯಸುತ್ತೇನೆ,” ಎಂದು ಶಿಲ್ಪಾ ಅನಿಸಿಕೆ ಹಂಚಿಕೊಂಡಿದ್ದಾರೆ. ರಾಜ್ ಅವರ ಕುಟುಂಬವನ್ನು ಹೊಗಳಿ ʻʻರಾಜ್ ಅವರನ್ನು ಪಡೆದಿದ್ದು ನಾನು ತುಂಬ ಅದೃಷ್ಟಶಾಲಿ. ನನ್ನನ್ನು ಪ್ರೀತಿಸುವ, ನನ್ನ ಸಾಧನೆಗಳ ಬಗ್ಗೆ ತುಂಬಾ ಹೆಮ್ಮೆಪಡುವ ವ್ಯಕ್ತಿ ಅವರು. ರಾಜ್ ಅವರನ್ನು ನಾನು ಅವಲಂಬಿತಳಾಗಿಲ್ಲ. ಮದುವೆಯ ನಂತರವೂ ಮಹಿಳೆ ತನ್ನದೇ ಆದ ಗುರುತನ್ನು ಹೊಂದಬಹುದು. ನನ್ನ ತಂದೆ ತಾಯಿ ಕೂಡ ನನ್ನ ಸಾಧನೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆʼʼ ಎಂದರು.
ಇದನ್ನೂ ಓದಿ: Shilpa Shetty: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ; ಕುಟುಂಬಸ್ಥರೊಂದಿಗೆ ಪೂಜೆ
ಇತ್ತೀಚಿನ ದಿನಗಳಲ್ಲಿ ಹಿರಿತೆರೆಯಲ್ಲಿ ನಟಿ ಆಗಾಗ ಅಷ್ಟೇ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಗ್ಗೆ ನಟಿ ಮಾತನಾಡಿ ʻʻನಾನು ಎಂದಿಗೂ ಕೆಲಸ ಮಾಡುವುದನ್ನು ನಿಲ್ಲಿಸಿಲ್ಲ. ಇಂದು, ನನ್ನ ದೊಡ್ಡ ಸಾಧನೆಯೆಂದರೆ, ನಾನು ಸಿನಿಮಾಗಳ ಹೊರತಾಗಿಯೂ ಬಹಳಷ್ಟು ಕೆಲಸವನ್ನು ಮಾಡುತ್ತಿದ್ದೇನೆ. ಮಹಿಳೆಯಾಗಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಿದೆʼʼ ಎಂದರು.