ಬೆಂಗಳೂರು: ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ. ಎಲ್ಲರೂ ರಾಮ ನಾಮ ಸ್ಮರಣೆ ಮಾಡುವ ಶುಭ ಘಳಿಗೆಯಲ್ಲಿ “ಶ್ರೀ ರಾಮ್, ಜೈ ಹನುಮಾನ್” ಎಂಬ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ.
ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಲಿರುವ “ಶ್ರೀ ರಾಮ್, ಜೈ ಹನುಮಾನ್” ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಮ ಮಂದಿರ ಉದ್ಘಾಟನೆಯ ಸಮಯಕ್ಕೆ (12.33) ಅನಾವರಣಗೊಂಡಿರುವುದು ಹಿಂದೂ ಧರ್ಮದ ಭಕ್ತಗಣಕ್ಕೆ ಸಂತಸದ ವಿಷಯ. “An Untold Epic of RAMAYANA” ಎಂಬ ಅಡಿಬರಹ ಈ ಚಿತ್ರಕ್ಕಿದೆ. ರಾಮಾಯಣದ ಕುರಿತು ಬಹುತೇಕರಿಗೆ ವಿಷಯ ತಿಳಿದಿದೆ. ಆದರೆ ಎಲ್ಲೂ ದಾಖಲಾಗದ ಕೆಲವು ವಿಷಯಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂಬುದು ಈ ಸಿನಿಮಾದ ಮತ್ತೊಂದು ವಿಶೇಷ.
ಸದ್ಯ ಹರಿಬಿಟ್ಟಿರುವ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಟ್ಟ, ಗುಡ್ಡ, ಬೆಂಕಿ, ನೀರು, ರಾಮ – ಹನುಮ… ಹೀಗೆ ಅನೇಕ ಸಂಗತಿಗಳು ಪೋಸ್ಟರ್‌ನಲ್ಲಿ ಅಡಕವಾಗಿವೆ. ಒಂದೆಡೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಖುಷಿಯಲ್ಲಿರುವ ಜನರಿಗೆ, ಈ ಪೋಸ್ಟರ್ ನೋಡುತ್ತಲೇ ಮೈ ಜುಂ ಎನಿಸುವಂತೆ ಮಾಡಿರುವುದು ಚಿತ್ರದ ಮೇಲೆ ಈಗಲೇ ಸಾಕಷ್ಟು ನಿರೀಕ್ಷೆ ಗರಿಗೆದರುವಂತೆ ಮಾಡಿದೆ.
ಇದನ್ನೂ ಓದಿ: Ram Mandir: ಬಿಜೆಪಿ ಕಾರ್ಯಾಲಯದಲ್ಲಿ ಸಂಭ್ರಮದ ವಾತಾವರಣ; ವಿಶೇಷ ಪೂಜೆಯಲ್ಲಿ ಬಿಎಸ್‌ವೈ ಭಾಗಿ
ಯುವ ನಿರ್ದೇಶಕ ಅವಧೂತ ಶ್ರೀ ರಾಮ್, ಜೈ ಹನುಮಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ಮಾಪಕ ಕೆ ಎ.ಸುರೇಶ್ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಯಶಸ್ವಿ ನಿರ್ಮಾಣ ಸಂಸ್ಥೆ ಎನ್ನಿಸಿಕೊಂಡಿರುವ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಮೂಡಿ ಬರುತ್ತಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನ ಖ್ಯಾತ ನಟರು, ಕಲಾವಿದರು ಸೇರಿದಂತೆ ದೊಡ್ಡ ತಾರಾಬಳಗವೇ ಇರಲಿದೆ. ಬಹುಕೋಟಿ ವಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಸದ್ಯ ಸ್ಟೋರಿ ಬೋರ್ಡ್ ಮತ್ತು ವಿಎಫ್ಎಕ್ಸ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಮತ್ತಷ್ಟು ವಿವರಗಳನ್ನು ಹಂಚಿಕೊಳ್ಳಲಿದೆ ಚಿತ್ರತಂಡ.