ಬೆಂಗಳೂರು: ನಟ ಸಿದ್ಧಾರ್ಥ್ (Actor Siddharth ) ಅವರು ಮಧುರೈ ವಿಮಾನ ನಿಲ್ದಾಣದ ಸಿಆರ್‌ಪಿಎಫ್ ಯೋಧರು ಹಿಂದಿಯಲ್ಲಿ ಮಾತನಾಡಿ ತಮ್ಮ ಪೋಷಕರಿಗೆ ಕಿರಿಕಿರಿ ಮಾಡಿದರು ಎಂದು ಆರೋಪಿಸಿದ್ದಾರೆ. ”ನನಗೆ ಹಾಗೂ ನನ್ನ ತಂದೆ, ತಾಯಿಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಿರುಕುಳ ನೀಡಿದ್ದಾರೆʼʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಮಾನ ನಿಲ್ದಾಣದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ʻʻತಮಿಳುನಾಡಿನ ಮಧುರೈ ಏರ್‌ಪೋರ್ಟಿನಲ್ಲಿ ನನ್ನ ತಂದೆ, ತಾಯಿಯನ್ನು ಸುಮಾರು 20 ನಿಮಿಷಗಳ ಕಾಲ ನಿಲ್ಲಿಸಿ ಸಿಆರ್‌ಪಿಎಫ್ ((ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಯೋಧರು ಕಿರುಕುಳ ನೀಡಿದ್ದಾರೆ. ನನ್ನ ತಂದೆ, ತಾಯಿಗೆ ವಯಸ್ಸಾಗಿದೆ. ಅವರ ಬ್ಯಾಗಿನಿಂದ ನಾಣ್ಯಗಳನ್ನು ಹೊರ ತೆಗೆಯಲು ಹೇಳಿ ಬಹಳ ಹೊತ್ತು ಹಿಂದಿಯಲ್ಲೇ ಮಾತನಾಡಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವಂತೆ ಮನವಿ ಮಾಡಿದರೂ ಹಿಂದಿಯಲ್ಲಿ ಮಾತನಾಡಿದ್ದಾರೆ. ಅವರು ಕೆಲಸ ಇಲ್ಲದ ಜನ, ಈ ರೀತಿ ತಮ್ಮ ಪವರ್ ತೋರಿಸುತ್ತಿದ್ದಾರೆ” ಎಂದು ಸಿದ್ದಾರ್ಥ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ | Actor Siddharth | ಮುಂಬೈ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಸಿದ್ಧಾರ್ಥ್-ಅದಿತಿ ರಾವ್ ಹೈದರಿ: ಫೋಟೊ ವೈರಲ್
ಸಿದ್ಧಾರ್ಥ್ ಅವರ ಈ ಪೋಸ್ಟ್‌ಗೆ ಕೆಲವು ನೆಟ್ಟಿಗರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ʻʻವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳಾಗಿ ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆʼʼ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ನೀವು ಭದ್ರತಾ ಯೋಧರನ್ನು ಕೆಲಸವಿಲ್ಲದ ಜನ ಎಂದು ಜರಿಯುವುದು ತಪ್ಪು ಎಂದು ಬುದ್ಧಿವಾದ ಹೇಳಿದ್ದಾರೆ.
ಈ ಹಿಂದೆ ನಟಿ ಅದಿತಿ ರಾವ್ ಹೈದರಿ ಹಾಗೂ ಟಾಲಿವುಡ್ ನಟ ಸಿದ್ಧಾರ್ಥ್ (Actor Siddharth) ಡೇಟಿಂಗ್ ವಿಚಾರದಲ್ಲಿ ಸಖತ್ ಸುದ್ದಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ಮುಂಬೈನ ಹೋಟೆಲ್ ಒಂದರಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ಸದ್ಯ ನಟ ಸಿದ್ಧಾರ್ಥ್ ಅವರು ಕಮಲ್ ಹಾಸನ್ ಅಭಿನಯದ ʻಇಂಡಿಯನ್ 2ʼ ನಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ | Actor Siddharth | ʻಹೃದಯದ ರಾಜಕುಮಾರಿʼ ಅದಿತಿ ಎಂದು ವಿಶ್ ಮಾಡಿದ ನಟ ಸಿದ್ಧಾರ್ಥ್: ವೈರಲ್ ಆಯ್ತು ಪೋಸ್ಟ್!