Site icon Vistara News

Simple Starಗೆ ಜನುಮದಿನದ ಸಂಭ್ರಮ: ಕಿರಿಕ್‌ ಕರ್ಣನ ಸಿನಿ ಜರ್ನಿ ಹೀಗಿದೆ!

Rakshit shetty Birthday

ಬೆಂಗಳೂರು: ಸ್ಯಾಂಡಲ್‌ವುಡ್‌ನ ʼಸಿಂಪಲ್‌ ಸ್ಟಾರ್‌ʼ ಖ್ಯಾತಿಯ ರಕ್ಷಿತ್‌ ಶೆಟ್ಟಿಗೆ ಇಂದು (ಜೂನ್ 6) ಜನುಮದಿನದ ಸಂಭ್ರಮ. 38ನೇ ವರ್ಷಕ್ಕೆ ಸಂಭ್ರಮದಿಂದ ಕಾಲಿಟ್ಟ ರಕ್ಷಿತ್‌ ಶೆಟ್ಟಿಗೆ ಅವರ ಅಭಿಮಾನಿ ಬಳಗ ಹಾಗೂ ಸ್ಯಾಂಡಲ್‌ವುಡ್‌ನ ಗಣ್ಯರು ಶುಭ ಕೋರುತ್ತಿದ್ದಾರೆ.

ʼʼಮುಂಬರುವ ನಿಮ್ಮೆಲ್ಲಾ ಸಿನಿಮಾಗಳು ಭರ್ಜರಿ ಯಶಸ್ಸು ಕಾಣಲಿʼʼ ಎಂದು ಸೋಷಿಯಲ್‌ ಮಿಡಿಯಾಗಳಲ್ಲಿ ವಿಶೇಷವಾಗಿ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಹಿಟ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಕ್ಷಿತ್‌ ಶೆಟ್ಟಿ ʼಕಿರಿಕ್‌ ಪಾರ್ಟಿʼ ಚಿತ್ರದ ಮೂಲಕ ಜನಮನ್ನಣೆ ಪಡೆದವರು.

ಕಿರಿಕ್‌ ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯ (NMAMIT) ದಿಂದ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ಸ್ ವಿಷಯದಲ್ಲಿ ಬಿಇ ಪದವಿ ಪಡೆದ ರಕ್ಷಿತ್‌, ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಎರಡು ವರ್ಷಗಳ ಕಾಲ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸಮಾಡಿದ್ದರು.

ಇದನ್ನೂ ಓದಿ : ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಶೆಟ್ಟಿ ಅವರ ಚೊಚ್ಚಲ ಚಲನಚಿತ್ರ 2020 ರಲ್ಲಿ ಬಿಡುಗಡೆಯಾದ ʼನಮ್‌ ಏರಿಯಾಲ್‌ ಒಂದಿನʼ, ಆದರೆ ಈ ಸಿನಿಮಾ ಸದ್ದು ಮಾಡಿರಲಿಲ್ಲ. 2013 ರಲ್ಲಿ ಅವರ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿʼ ಪ್ರೇಕ್ಷಕರನ್ನು ರಂಜಿಸಿತ್ತು.  ʼಉಳಿದವರು ಕಂಡಂತೆʼ ವ್ಯಾಪಕ ಪ್ರಶಂಸೆ ಪಡೆದಿದ್ದರೆ, ʼವಾಸ್ತು ಪ್ರಕಾರʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಅವರ ಯಶಸ್ಸಿನ ಪ್ರಯಾಣವನ್ನು ಮುಂದುವರಿಸಿದ್ದವು.

‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ರಾಷ್ಟ್ರಮಟ್ಟದಲ್ಲಿ ಹವಾ ಎಬ್ಬಿಸಿತ್ತು. ಡಿಫ್‌ರೆಂಟ್‌ ಲುಕ್‌ನೊಂದಿಗೆ ಬಂದ ರಕ್ಷಿತ್‌ ಶೆಟ್ಟಿ, ಈ ಸಿನಿಮಾದ ಕಥೆ ಮತ್ತು ಸಾಹಿತ್ಯಗಳಿಂದ ಹೆಸರು ಪಡೆದಿದ್ದರು. ಅವರ ʼರಿಚರ್ಡ್ ಆ್ಯಂಟೋನಿʼ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.

ನಿರಾಸೆ ಮೂಡಿಸಿದ್ದ ದಿನಗಳು

ಸಿನಿಮಾ ಮಾಡಬೇಕು ಎಂಬ ಮಹಾದಾಸೆಯಿಂದ ರಕ್ಷಿತ್‌ ಎಂಜಿನಿಯರ್‌ ಕೆಲಸ ಬಿಟ್ಟು, ಸ್ಯಾಂಡ್‌ಲ್‌ವುಡ್‌ಗೆ ಎಂಟ್ರಿ ನೀಡಿದ್ದರು. ಆದರೆ ರಕ್ಷಿತ್‌ ಅಭಿನಯದ ಮೊದಲ ಸಿನಿಮಾ ʼತುಘಲಕ್‌ʼ ಸೋತಿತ್ತು.‌ ಮುಂದೇನು ಮಾಡಬೇಕು ಎಂದು ತೋಚದೇ ಇದ್ದಾಗ ಅವರ ಕೈ ಹಿಡಿದ್ದಿದ್ದು, ‘ಸಿಂಪಲ್ಲಾಗಿ ಒಂದು ಲವ್‌ ಸ್ಟೋರಿʼ. ಈ ಚಿತ್ರ ರಕ್ಷಿತ್ ಬದುಕಿನ ಹಾದಿಯನ್ನು ಬದಲಾಯಿಸಿದ್ದಲ್ಲದೇ, ಚಿತ್ರರಂಗದಲ್ಲಿ ಹೊಸ ನಾಯಕನ ಉದಯಕ್ಕೆ ಸಹ ಕಾರಣವಾಗಿತ್ತು.

ಈ ಎರಡು ಚಿತ್ರಗಳ ನಂತರ ಇತಿಹಾಸ ಸೃಷ್ಟಿಸಿದ ಇನ್ನೊಂದು ಚಿತ್ರ ಎಂದರೆ ʼಕಿರಿಕ್ ಪಾರ್ಟಿʼ. ಇದು ಕಾಲೇಜ್ ಹುಡುಗರ ಫೇವರೆಟ್​ ಚಿತ್ರವಾಯಿತು. ಅದರ ಡೈಲಾಗ್, ಕರ್ಣನ ಪಾತ್ರ ಅಭಿಮಾನಿಗಳ ಮನಸ್ಸಲ್ಲಿ ಈಗಲೂ ಉಳಿದಿದೆ.

ಪ್ರಶಸ್ತಿಗಳ ಸರಮಾಲೆ

ನಿರ್ದೇಶಕನಾಗಿ ಕರ್ನಾಟಕ ಸರ್ಕಾರದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಫಿಲಂಫೇರ್ (ದಕ್ಷಿಣ) ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ, ಅತ್ಯುತ್ತಮ ಸಾಹಿತಿ, ಅತ್ಯುತ್ತಮ ನಟ ಮುಂತಾದ ಪ್ರಶಸ್ತಿ ರಕ್ಷಿತ್‌ ಶೆಟ್ಟಿಗೆ ಸಂದಿವೆ.

ಚಾರ್ಲಿಯತ್ತ ಕಣ್ಣು

ರಕ್ಷಿತ್‌ ಅವರ ಬಹು ನಿರೀಕ್ಷೆಯ ಚಿತ್ರ ʼ777 ಚಾರ್ಲಿʼ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ದೇಶಾದ್ಯಂತ ಜೂನ್‌ 10 ರಂದು ತೆರೆಕಾಣಲಿದೆ. ವಿಭಿನ್ನವಾದ ಕತೆಯನ್ನು ಹೊಂದಿರುವ ಈ ಚಿತ್ರವನ್ನು ಕಿರಣ್‌ ನಿರ್ದೇಶಿಸಿದ್ದು, ಚಾರ್ಲಿ ಎಂಬ ನಾಯಿಯೊಂದರ ಕತೆ ಈಗಾಗಲೇ ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದೆ. ಇದುವರೆಗೆ ಬರೋಬ್ಬರಿ 21 ನಗರಗಳಲ್ಲಿ ಪೇಯ್ಡ್‌ ಪ್ರೀಮಿಯರ್‌ ಕಂಡಿರುವುದು ವಿಶೇಷ.

ದೆಹಲಿ ಲಖನೌ ಮುಂತಾದ ಕಡೆಗಳಲ್ಲಿ ಈಗಾಗಲೇ ʼ777 ಚಾರ್ಲಿʼ ಸಿನಿಮಾ ಪೇಯ್ಡ್‌ ಪ್ರೀಮಿಯರ್‌ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ರಕ್ಷಿತ್‌ ಅವರ ಮುಂದಿನ ಸಿನಿಮಾ ʼಸಪ್ತ ಸಾಗರ ದಾಚೆ ಎಲ್ಲೋʼ ಕೂಡ ನಿರೀಕ್ಷೆ ಮೂಡಿಸಿದೆ.

ಅವರ ಹುಟ್ಟು ಹಬ್ಬದ ದಿನವಾದ ಇಂದು (ಜೂನ್‌ 6) ಸಂಜೆ 6 ಗಂಟೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ | 777 Charlie | ರಕ್ಷಿತ್‌ ಶೆಟ್ಟಿ ಸಿನಿಮಾ ವಿತರಣೆ ಮಾಡಲಿದೆ UFO: ಮೇ 16ಕ್ಕೆ ಟ್ರೈಲರ್‌ ಬಿಡುಗಡೆ

Exit mobile version