ಕೋಲ್ಕತ್ತ: ಗಾಯಕ ಕೃಷ್ಣ ಕುಮಾರ್ ಮಂಗಳವಾರ ರಾತ್ರಿ ಕೋಲ್ಕತ್ತದ ನಜ್ರುಲ್ ಮಂಚಾ ಸಭಾಂಗಣದಲ್ಲಿ ಸಂಗೀತ ಗೋಷ್ಠಿ ಮುಗಿಸಿ, ಅಭಿಮಾನಿಗಳನ್ನು ರಂಜಿಸಿದ ಕೆಲವೇ ಹೊತ್ತಲ್ಲಿ ಮೃತಪಟ್ಟರು. ಅಂದು ನಜ್ರುಲ್ ಮಂಚಾ ಸಭಾಂಗಣದಲ್ಲಿ ಏನಾಯಿತು? ಕೆಕೆ ಕೊನೇ ಕ್ಷಣಗಳು ಹೇಗಿದ್ದವು ಎಂಬುದನ್ನು ಅದೇ ಅಡಿಟೋರಿಯಂನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ʼನಾನು 12ವರ್ಷಗಳಿಂದ ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ಆದರೆ ಇಷ್ಟು ವರ್ಷಗಳಲ್ಲಿ ಸಭಾಂಗಣ ಈ ಪರಿ ಜನರಿಂದ ಕಿಕ್ಕರಿದು ತುಂಬಿದ್ದನ್ನು ಎಂದಿಗೂ ನೋಡಿರಲಿಲ್ಲ. ಸಭಾಂಗಣದಲ್ಲಿ 2462 ಆಸನಗಳಷ್ಟೇ ಇದ್ದವು, ಆದರೆ 6000ಕ್ಕೂ ಅಧಿಕ ಜನರು ಕೆಕೆ ಕಾನ್ಸರ್ಟ್‌ಗೆ ಬಂದಿದ್ದರು. ಅನೇಕರು ಪಾಸ್ ಇಲ್ಲದೆಯೇ ಆಗಮಿಸಿದ್ದರುʼ ಎಂದು ಹೇಳಿದ್ದಾರೆ.
ಬೆವರುತ್ತಿದ್ದರು ಕೆಕೆ !
ʼಕೃಷ್ಣಕುಮಾರ್ ಕುನ್ನಾಥ್ ಸಂಜೆ 6 ಗಂಟೆ ಹೊತ್ತಿಗೆ ಗಾಯನ ಪ್ರಾರಂಭಿಸಿದರು. ಅದಕ್ಕೂ ಮೊದಲು ಸಂಜೆ 5ಗಂಟೆ ಹೊತ್ತಿಗೆ ಅಡಿಟೋರಿಯಂ ಬಾಗಿಲು ತೆರೆಯಲಾಗಿತ್ತು. ವೇದಿಕೆಯ ಎರಡೂ ಕಡೆಗಳಲ್ಲಿ ಜನರು ತುಂಬುತ್ತಲೇ ಇದ್ದರು. ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಕೆಕೆ ಸೊಗಸಾದ ಧ್ವನಿಯಲ್ಲಿ ಒಂದರ ಬೆನ್ನಿಗೆ ಒಂದರಂತೆ ಹಾಡುಗಳನ್ನು ಹಾಡುತ್ತಲೇ ಇದ್ದರು. ಆದರೆ ಅವರು ತುಂಬ ಬೆವರುತ್ತಿದ್ದರು. ಆಗಾಗ ವೇದಿಕೆಯಿಂದ ಸ್ವಲ್ಪ ಮರೆಯಾಗಿ ಬೆವರನ್ನು ಒರೆಸಿಕೊಳ್ಳುತ್ತಿದ್ದರು. ಡಾನ್ಸ್ ಮಾಡಲು ಯತ್ನಿಸುತ್ತಿದ್ದರೂ, ಅವರ ದೇಹ ಸಹಕರಿಸುತ್ತಿರಲಿಲ್ಲ. ಎಸಿ ಆಫ್ ಮಾಡಿರಲಿಲ್ಲ. ಆದರೆ ಅಡಿಟೋರಿಯಂ ಸಾಮರ್ಥ್ಯಕ್ಕಿಂತಲೂ ಹೆಚ್ಚಿಗೆ ಜನ ಸೇರಿದ್ದರಿಂದ ಏರ್ ಕಂಡೀಷನರ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇನ್ನು ಬಾಗಿಲು ತೆರೆದಿದ್ದರೂ ಗಾಳಿ ಬರಲೂ ಜಾಗವಿರಲಿಲ್ಲ. ಕೆಕೆ ಹಾಡು ಶುರುಮಾಡಿದಾಗಿನಿಂದಲೂ ಜನರಂತೂ ಹುಚ್ಚೆದ್ದು ಕುಣಿಯುತ್ತಿದ್ದರು. ಗಲಾಟೆಯೂ ವಿಪರೀತವಾಗಿತ್ತು. ರಾತ್ರಿ ಸುಮಾರು 8.40ರ ಹೊತ್ತಿಗೆ ಗಾಯನ ಗೋಷ್ಠಿ ಮುಗಿಯಿತು. ಅಷ್ಟೊತ್ತಿಗೆ ಕೃಷ್ಣಕುಮಾರ್ ತುಂಬ ಬಳಲಿದ್ದರು. ವೇದಿಕೆಯಿಂದ ಹೊರ ಹೋಗುವಾಗಲೇ ಅವರು ತಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದರುʼ ಎಂದು ಆ ವ್ಯಕ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್ ಹಾಡಿದ್ದರು!
ಸಭಾಂಗಣದಲ್ಲಿ ಎಸಿ(ಹವಾ ನಿಯಂತ್ರಕ) ಆಫ್ ಆಗಿದ್ದರಿಂದಲೇ ಕೃಷ್ಣರಾಜ್ ಕುನ್ನಾಥ್‌ಗೆ ಉಸಿರುಕಟ್ಟುತ್ತಿತ್ತು. ಅಡಿಟೋರಿಯಂ ಸಿಬ್ಬಂದಿ, ಮ್ಯಾನೇಜ್‌ಮೆಂಟ್‌ನ ನಿರ್ಲಕ್ಷ್ಯ ಇದು ಎಂಬ ಆರೋಪವೂ ಕೇಳಿಬಂದಿದೆ. ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರೂ ಟ್ವೀಟ್ ಮಾಡಿ, ಕೆಕೆ ಹಾಡುತ್ತಿದ್ದಾಗ ಅವರಿಗೆ ವಿಪರೀತ ಸೆಖೆಯಾಗುತ್ತಿತ್ತು. ಎಸಿ ಹಾಕಿ, ಲೈಟ್ ಕಡಿಮೆ ಮಾಡಿ ಎಂದು ಮಧ್ಯೆ ಒಂದೆರಡು ಬಾರಿ ಹೇಳಿದ್ದು ವಿಡಿಯೋದಲ್ಲಿ ಕೇಳಿಸುತ್ತದೆ. ಆದರೆ ಯಾರೊಬ್ಬರೂ ಗಮನ ಹರಿಸಲಿಲ್ಲ ಎಂದು ಹೇಳಿದ್ದಾರೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಕೋಲ್ಕತ್ತ ಮೇಯರ್ ಫಿರ್ಹಾದ್ ಹಕೀಮ್ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಎಸಿ ಬಂದ್ ಆಗಿತ್ತು ಎಂದು ನಾನು ಹೇಳಲಾರೆ. ಆದರೆ ತುಂಬ ಜನ ಸೇರಿದ್ದರಿಂದ ಎಸಿ ಪ್ರಭಾವ ಬೀರಲಿಲ್ಲ. ಇದರಿಂದ ಕೆಕೆಗೆ ತೊಂದರೆಯಾಗಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದಾಯದ ವೇಳೆಯಲ್ಲಿ ನೆನಪು; ಗಾಯಕ ಕೆಕೆ ಹಾಡಿದ್ದ ಕನ್ನಡ ಹಾಡುಗಳು ಇವು