ಮುಂಬೈ: ಕುಮಾರ್ ಸಾನು (Singer Kumar Sanu) 90ರ ದಶಕದ ಅತ್ಯಂತ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಅವರ ʼಚುರಾ ಕೆ ದಿಲ್ ಮೇರಾʼ, ʼಬಸ್ ಏಕ್ ಸನಮ್ ಚಾಹಿಯೆʼ ಹಾಡುಗಳನ್ನು ಇಂದಿಗೂ ಅನೇಕರು ಗುನುಗುತ್ತಲೇ ಇರುತ್ತಾರೆ. ಹಾಡಿನ ಮೂಲಕ ಮೋಡಿ ಮಾಡುತ್ತಿದ್ದ ಈ ಗಾಯಕನ ನಿಜವಾದ ಹೆಸರು ಕುಮಾರ್ ಅಲ್ಲವೇ ಅಲ್ಲ. ಬಂಗಾಳಿಯವರಾದ ಅವರ ಹೆಸರು ಬದಲಾಗಿದ್ದರಲ್ಲೂ ಬಲವಾದ ಕಾರಣವೊಂದಿದೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಗಾಯಕ ಸ್ನೇಹದೀಪ್ರ ಕೇಸರಿಯಾ ಹಾಡಿಗೆ ಪ್ರಧಾನಿ ಮೋದಿ ಫಿದಾ; ವಿವಿಧತೆಯಲ್ಲಿ ಏಕತೆಯ ಪ್ರತಿಬಿಂಬ ಎಂದು ಟ್ವೀಟ್
ಕೋಲ್ಕೊತಾ ಮೂಲದವರಾದ ಕುಮಾರ್ ಅವರ ನಿಜವಾದ ಹೆಸರು ಕೇದರನಾಥ್ ಭಟ್ಟಾಚಾರ್ಯ. ಆದರೆ ಅವರು ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದು ಮಾತ್ರ ಕುಮಾರ್ ಸಾನು ಆಗಿಯೇ. ಅವರು ಆರಂಭಿಕ ದಿನಗಳಲ್ಲಿ ಕೋಲ್ಕೊತಾದ ಹೋಟೆಲ್‌ಗಳಲ್ಲಿ ಹಾಡುಗಳನ್ನು ಹಾಡುತ್ತಿದ್ದರಂತೆ. ಅಲ್ಲಿ ಬಂದ ಹಣದಿಂದ ತಮ್ಮದೇ ಆದ ಕ್ಯಾಸೆಟ್ ತಯಾರಿಸಿಕೊಳ್ಳುತ್ತಿದ್ದರು. ನಂತರ ಅದನ್ನು ಸಂಗೀತ ನಿರ್ದೇಶಕರ ಬಳಿ ತೆಗೆದುಕೊಂಡು ಹೋಗಿ ಸಿನಿಮಾಗಳಲ್ಲಿ ಹಾಡುವುದಕ್ಕೆ ಅವಕಾಶ ಕೋರುತ್ತಿದ್ದರು.
ಆದರೆ ಕೋಲ್ಕೊತಾದಲ್ಲಿ ಯಾವೊಬ್ಬ ಸಂಗೀತ ನಿರ್ದೇಶಕರೂ ಕೇದರನಾಥ ಅವರಿಗೆ ಅವಕಾಶ ಕೊಡುವುದಕ್ಕೆ ಒಪ್ಪಿಕೊಂಡಿಲ್ಲ. ಅವರ ಧ್ವನಿ ಪ್ರಸಿದ್ಧ ಗಾಯಕ ಕಿಶೋರ್ ಕುಮಾರ್ ಅವರ ಧ್ವನಿಯಂತೆಯೇ ಇತ್ತು ಎನ್ನುವ ಕಾರಣಕ್ಕೆ ಯಾರೊಬ್ಬರೂ ಅವರಿಗೆ ಅವಕಾಶ ಕೊಟ್ಟಿಲ್ಲ. “ಕಿಶೋರ್ ಕುಮಾರ್ ಅವರೇ ಇರುವಾಗ ಅವರಿಂದಲೇ ಹಾಡಿಸಿಕೊಳ್ಳುತ್ತೇವೆ. ನಿಮ್ಮ ಬಳಿ ಏಕಾಗಿ ಹಾಡಿಸೋಣ” ಎಂದು ಹೇಳುತ್ತಿದ್ದರಂತೆ. ಮುಂದೆ ಮುಂಬೈಗೆ ಬಂದ ಅವರು ಅಲ್ಲಿಯೂ ಕೂಡ ಹೋಟೆಲ್‌ಗಳಲ್ಲಿ ಹಾಡಿ ಹಣ ಮಾಡಿ ಕ್ಯಾಸೆಟ್ ತಯಾರಿಸಲಾರಂಭಿಸಿದರು.
ಇದನ್ನೂ ಓದಿ: Bombay Jayashree: ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಆಗ ಅವರಿಗೆ ಗುಲ್ಶನ್ ಜಿ ಅವರೊಂದಿಗೆ ಕವರ್ ವರ್ಷನ್ ಒಂದಕ್ಕೆ ಹಾಡುವುದಕ್ಕೆ ಅವಕಾಶ ಸಿಕ್ಕಿತು ಹಾಗೆಯೇ ಜೀನಾ ತೇರಿ ಗಲಿ ಮೇ ಸಿನಿಮಾದಲ್ಲಿಯೂ ಅವಕಾಶ ಶಿಕ್ಕಿತು. ಆ ಸಿನಿಮಾದಲ್ಲಿ ಅವರು ಹಾಡಿದ ಎರಡೂ ಹಾಡುಗಳು ಸೂಪರ್ ಹಿಟ್ ಆದವು. ಅದರಿಂದಾಗಿ ಗುಲ್ಶನ್ ಅವರಿಗೆ ನಂಬಿಕೆ ಹುಟ್ಟಿ ಕೇದರನಾಥ ಅವರಿಗೆ ಅವಕಾಶಗಳನ್ನು ಕೊಡಲಾರಂಭಿಸಿದರು.
ಈ ಕೇದರಾನಾಥ ಅವರಿಗೆ ಕುಮಾರ್ ಸಾನು ಎಂದು ಹೆಸರು ಕೊಟ್ಟವರು ಸಂಗೀತ ನಿರ್ದೇಶಕರುಗಳಾದ ಕಲ್ಯಾಣ್‌ಜೀ ಮತ್ತು ಆನಂದ್‌ಜೀ. “ಬಂಗಾಳಿ ಗಾಯಕರು ಹಿಂದಿ ಮತ್ತು ಉರ್ದು ಹಾಡುಗಳನ್ನು ಚೆನ್ನಾಗಿ ಹಾಡುವುದಿಲ್ಲ ಎಂಬ ಕಲ್ಪನೆ ಬಾಲಿವುಡ್‌ನಲ್ಲಿದೆ. ನಿನ್ನ ಹೆಸರಿನಲ್ಲಿ ಭಟ್ಟಾಚಾರ್ಯ ಎಂದಿರುವುದರಿಂದಾಗಿ ನೀನು ಬಂಗಾಳಿ ಎಂದು ಗೊತ್ತಾಗುತ್ತದೆ. ಹಾಗಾಗಿ ನಿನ್ನ ಹೆಸರನ್ನು ಕುಮಾರ್ ಸಾನು ಎಂದು ಬದಲಿಸಿಕೊ” ಎಂದು ಅವರೇ ಹೇಳಿದ್ದರು ಎಂದು ಕುಮಾರ್ ಅವರು ತಿಳಿಸಿದ್ದಾರೆ.
ಕುಮಾರ್ ಸಾನು ಅವರಿಗೆ ಚಿಕ್ಕ ವಯಸ್ಸಿನಿಂದಲೂ ಅವರ ಕುಟುಂಬ ಛಾನು ಎಂದು ಕರೆಯುತ್ತಿದ್ದರಂತೆ. ಮುಂದೆ ಅದೇ ಸಾನು ಆಗಿ ಬದಲಾಯಿತು ಎಂದೂ ಕೂಡ ಕುಮಾರ್ ಅವರು ತಿಳಿಸಿದ್ದಾರೆ. ಕುಮಾರ್ ಅವರು ಈವರೆಗೆ 26 ಭಾಷೆಗಳಲ್ಲಿ ಒಟ್ಟು 21 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅವೆಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟ ಎಂದು ಹೇಳಿರುವ ಅವರು ಈ ವರ್ಷದ ಅಂತ್ಯದೊಳಗೆ ಒಟ್ಟು 22 ಸಾವಿರ ಹಾಡುಗಳ ದಾಖಲೆ ದಾಟುವುದಾಗಿಯೂ ತಿಳಿಸಿದ್ದಾರೆ.