ಬೆಂಗಳೂರು: ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಅಭಿನಯದ ‘ಸಲಾರ್’ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ‘ಸಲಾರ್: ಭಾಗ 1’ ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಚಿತ್ರ ಘೋಷಣೆಯಾದಾಗಿನಿಂದ, ಕೆಜಿಎಫ್ ಸಿನಿಮಾ ಮುಂದುವರಿದ ಭಾಗವೇ ಸಲಾರ್ ಆಗಿರಬೇಕು ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಲು ಶುರು ಮಾಡಿದ್ದರು. ‘ಸಲಾರ್’ ಸಿನಿಮಾದಲ್ಲಿ ಗಾಯಕಿ ತೀರ್ಥಾ ಸುಭಾಷ್ ಅವರು ಹಾಡೊಂದನ್ನು ಹಾಡಿದ್ದಾರೆ. ಸಂದರ್ಶನವೊಂದರಲ್ಲಿ ಬಾಯ್ತಪ್ಪಿ ʻಪ್ರಭಾಸ್ ಅಂಕಲ್, ಪೃಥ್ವಿರಾಜ್ ಅಂಕಲ್, ಯಶ್ ಅಂಕಲ್ ಜತೆ ಕೆಲಸ ಮಾಡಿದ್ದು ಖುಷಿ ಇದೆ’ ಎಂದಿದ್ದಾರೆ. ಇದೀಗ ಈ ಹೇಳಿಕೆ ಭಾರಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗಳು ಆಗುತ್ತಿವೆ. ಗಾಸಿಪ್ ಆದ ಬಳಿಕ ತೀರ್ಥಾ ಸುಭಾಷ್ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.
ತೀರ್ಥಾ ಅವರು ಮೂಲತಃ ಕೇರಳದವರು. ಅವರು ಇತ್ತೀಚೆಗೆ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಗೆದ್ದಿದ್ದಾರೆ. ಈ ಖುಷಿಯನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶನದ ವೇಳೆ ʼಸಲಾರ್ʼನಲ್ಲಿ ನಾನು ಹಾಡಿದ್ದೇನೆ ಎಂದು ಬಹಿರಂಗಪಡಿಸಿದರು. ಜತೆಗೆ ಬಾಯ್ತಪ್ಪಿ ʻಪ್ರಭಾಸ್ ಅಂಕಲ್, ಪೃಥ್ವಿರಾಜ್ ಅಂಕಲ್, ಯಶ್ ಅಂಕಲ್ ಜತೆ ಕೆಲಸ ಮಾಡಿದ್ದು ಖುಷಿ ಇದೆ’ ಎಂದಿದ್ದರು. ಅವರ ಮಾತು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ನಂತರ ಇದಕ್ಕೆ ತೀರ್ಥಾ ಮತ್ತೊಂದು ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ನಾನು ಕೆಜಿಎಫ್ ಸಿನಿಮಾವನ್ನು ಹಲವು ಬಾರಿ ನೋಡಿದ್ದೇನೆ. ಕೆಜಿಎಫ್ ತಂಡದ ಮ್ಯೂಸಿಕ್ ಡೈರೆಕ್ಟರ್ ʼಸಲಾರ್ʼಗೂ ಕೆಲಸ ಮಾಡಿದ್ದಾರೆ ಎಂದು ನನ್ನ ತಂದೆ ಹೇಳಿದ್ದರು. ಹಾಗಾಗಿ ನನ್ನ ಮನಸ್ಸಿನಲ್ಲಿ ಯಶ್ ಅಂಕಲ್ ಕೂಡ ಸಲಾರ್ ಚಿತ್ರದಲ್ಲಿ ಇರುತ್ತಾರೆ ಎಂದು ಭಾವಿಸಿದ್ದೆ. ಹಾಗಾಗಿ ನಾನು ಆ ಊಹೆಯಲ್ಲಿಯೇ ಯಶ್ ಅವರ ಹೆಸರನ್ನು ಹೇಳಿದೆ’ ಎಂದು ಅವರು ಹೇಳಿದ್ದಾರೆ.
ತೀರ್ಥಾ ಅವರ ಪೋಷಕರು ಮಂಗಳೂರಿನಲ್ಲಿ ʻಸಲಾರ್ʼ ಹಾಡನ್ನು ರೆಕಾರ್ಡ್ ಮಾಡಿರುವುದಾಗಿ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಸಂಗೀತ ಸಂಯೋಜಕ ರವಿ ಬಸ್ರೂರ್ ಕೂಡ ರೆಕಾರ್ಡಿಂಗ್ ಆಗುವಾಗ ಇದ್ದರು ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Salaar Movie: ಸಲಾರ್ಗೆ ʻಎʼ ಸರ್ಟಿಫಿಕೇಟ್; ಅಬ್ಬರಿಸಲಿದೆಯೇ ಕ್ರೌರ್ಯ?
ಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ʼʼಸಲಾರ್ʼ ಚಿತ್ರದ ಕಥೆ ದೀರ್ಘವಾಗಿದೆ. ಈ ಕಥೆಯನ್ನು ಹೇಳಲು ಎರಡು ಭಾಗ ಬೇಕೇ ಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಆದರೆ ʼಕೆಜಿಎಫ್ʼ ಆರಂಭಿಸುವಾಗ ಎರಡು ಪಾರ್ಟ್ಗಳಲ್ಲಿ ತೆರೆಗೆ ತರುವ ಉದ್ದೇಶವಿರಲಿಲ್ಲ. ಆದರೆ ʼಸಲಾರ್ʼ ವಿಚಾರದಲ್ಲಿ ಎರಡು ಭಾಗ ಎನ್ನುವುದು ಪೂರ್ವ ನಿರ್ಧರಿತವಾಗಿತ್ತುʼʼ ಎಂದು ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.
ʼಕೆಜಿಎಫ್ʼ-ʼಸಲಾರ್ʼ ಬೇರೆ ಬೇರೆ
“ಸಲಾರ್ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್ʼ ಹೇಳುವ ಬೇರೆಯದೇ ಕಥೆಗಾಗಿ ಜನರು ಅದನ್ನು ನೋಡುತ್ತಾರೆ ಎಂದು ಭಾವಿಸುತ್ತೇನೆ. ʼಸಲಾರ್ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆ. ಭಾರತದಲ್ಲಿ ಕಥೆ ಹೇಳಲಿರುವ ಅತ್ಯುತ್ತಮ ಮಾಧ್ಯಮ ಚಲನಚಿತ್ರವಾಗಿರುವುದರಿಂದ ಅದನ್ನು ʼಸಲಾರ್ʼ ಮೂಲಕ ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲಿದ್ದೇನೆ ಎನ್ನುವ ನಿರೀಕ್ಷೆ ಇದೆʼʼ ಎಂದು ಪ್ರಶಾಂತ್ ತಿಳಿಸಿದ್ದರು.