ಚೆನ್ನೈ: ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ ಕಾಲಿವುಡ್‌ನ ಜನಪ್ರಿಯ ನಟ ಜಯಂ ರವಿ (Jayam Ravi) ಅಭಿನಯದ ‘ಸೈರನ್’ (Siren Movie) ಚಿತ್ರ ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಫೆಬ್ರವರಿ 16ರಂದು ಬಿಡುಗಡೆಯಾಗಿದ್ದ ಈ ಸಸ್ಪೆನ್ಸ್ ಥ್ರಿಲ್ಲರ್ ಪ್ರೇಕ್ಷಕರ ಗಮನ ಸೆಳೆದಿತ್ತು. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ʼಸೈರನ್ʼ ಕೆಲವೇ ದಿನಗಳಲ್ಲಿ ಒಟಿಟಿ (OTT) ಮೂಲಕ ಮನೆ ಮನೆಗೂ ತಲುಪಲಿದೆ.
ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್?
ಆ್ಯಂಟನಿ ಭಾಗ್ಯರಾಜ್ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ ‘ಸೈರನ್’ ಸಿನಿಮಾದಲ್ಲಿ ಕೀರ್ತಿ ಸುರೇಶ್ ಮತ್ತು ಅನುಪಮಾ ಪರಮೇಶ್ವರನ್ ನಾಯಕಿಯರಾಗಿ ನಟಿಸಿದ್ದಾರೆ. ಇದು ಏಪ್ರಿಲ್ 11ರಿಂದ ಸೈರನ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ʼಸೈರನ್ʼ ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿತ್ತು. ಒಟಿಟಿಯಲ್ಲಿ ತಮಿಳು, ತೆಲುಗು ಜತೆಗೆ ಕನ್ನಡ ಹಾಗೂ ಮಲಯಾಳಂನಲ್ಲೂ ಲಭಿಸಲಿದೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನದ ಈ ಸಿನಿಮಾ ತಂದೆ-ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ.
ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕೀರ್ತಿ ಸುರೇಶ್
ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರತಿಭಾವಂತ ನಟಿ ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಕೆ.ನಂದಿನಿ ಎಂಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅವರು ಗಮನ ಸಳೆದಿದ್ದಾರೆ. ಕೀರ್ತಿ ಸುರೇಶ್ ಮೊದಲ ಬಾರಿ ಜಯಂ ರವಿ ಜತೆ ತೆರೆ ಹಂಚಿಕೊಂಡಿರುವುದು ಕೂಡ ಈ ಚಿತ್ರದ ವಿಶೇಷತೆ. ಮಾತ್ರವಲ್ಲ ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಜೆನ್ನಿಫರ್ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.
ಬಹು ತಾರಾಗಣ
ಬಹು ತಾರಾಗಣ ʼಸೈರನ್ʼ ಚಿತ್ರದ ಮತ್ತೊಂಡು ಹೆಗ್ಗಳಿಕೆ. ತಿಲಗನ್ (ಜಯಂ ರವಿ) ಕಾಂಚೀಪುರಂನ ಪ್ರಾಮಾಣಿಕ ಆಂಬ್ಯುಲೆನ್ಸ್ ಚಾಲಕ. ತನ್ನ ಪತ್ನಿ ಜೆನ್ನಿಫರ್ ಮತ್ತು ತನ್ನ ಸ್ನೇಹಿತ ಕಥಿರ್‌ನನ್ನು ಕೊಲೆ ಮಾಡಿದ ಸುಳ್ಳು ಆರೋಪದ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ. 14 ವರ್ಷಗಳ ನಂತರ ಜೆನ್ನಿಫರ್ ಮತ್ತು ಕಥಿರ್ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ತಿಲಗನ್ 14 ದಿನಗಳ ಪೆರೋಲ್‌ನಲ್ಲಿ ಹೊರ ಬರುತ್ತಾನೆ. ಹೀಗೆ ಕಥೆ ರೋಚಕವಾಗಿ ಸಾಗುತ್ತದೆ.
ಸದ್ಯ ಜಯಂ ರವಿ ʼಜೀನಿʼ (Genie) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನನ್ ಜೂನಿಯರ್ (ಭುವನೇಶ್ ಅರ್ಜುನನ್) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಕೂತೂಹಲ ಮೂಡಿಸಿದೆ. ʼಜೀನಿʼ ಫ್ಯಾಂಟಸಿ ಸಿನಿಮಾ. ಇದೇ ಮೊದಲ ಬಾರಿಗೆ ಜಯಂ ರವಿ ಫ್ಯಾಂಟಸಿ ಕಥೆಯಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಫಸ್ಟ್ ಲುಕ್ ಕೂಡ ವಿಭಿನ್ನವಾಗಿದೆ. ಸರಪಣಿಯಲ್ಲಿ ಬಂಧಿಯಾಗಿರುವ ಜಯಂ ರವಿ, ಜುಟ್ಟು ಕಟ್ಟಿ ಸ್ಟೈಲೀಶ್ ಲುಕ್‌ನಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: Jayam Ravi: ಫ್ಯಾಂಟಸಿ ‘ಜೀನಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್; ಹೊಸ ಅವತಾರದಲ್ಲಿ ಜಯಂ ರವಿ ಮೋಡಿ
ಸೈರನ್ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದರೆ ಜೀನಿಯಲ್ಲಿ ಮೂವರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಜಯಂ ರವಿಗೆ ಜತೆಗೆ ಮೊದಲ ಬಾರಿ ಕಲ್ಯಾಣಿ ಪ್ರಿಯದರ್ಶನ್, ಕನ್ನಡತಿ ಕೃತಿ ಶೆಟ್ಟಿ ಮತ್ತು ವಾಮಿಕಾ ಗಬ್ಬಿ ತೆರೆ ಹಂಚಿಕೊಳ್ಳುತ್ತಿದ್ದು, ಆಸ್ಕರ್ ವಿಜೇತ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೇ. 75ರಷ್ಟು ಶೂಟಿಂಗ್ ಪೂರ್ತಿಯಾಗಿದ್ದು, ಕೇವಲ 3 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನು 10 ದಿನಗಳಲ್ಲಿ ಆ ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ತೊಡಗಿಸಿಕೊಳ್ಳಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ