Site icon Vistara News

SK Bhagavan: ಗೇಟ್ ಕೀಪರ್ ನಿಂದ ಸ್ಟಾರ್ ನಿರ್ದೇಶಕನವರೆಗೆ! ಎಸ್ ಕೆ ಭಗವಾನ್ ಸಿನಿ ಎಂಟ್ರಿಯೇ ಅಚ್ಚರಿ!

SK Bhagavan From gate keeper to star director! SK Bhagwan's movie entry is a surprise!

ಬೆಂಗಳೂರು: ಶ್ರೀನಿವಾಸ ಕೃಷ್ಣ ಅಯ್ಯಂಗಾರ್ (SK Bhagavan) ಎಂದರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಇದೀಗ ನಮ್ಮನ್ನು ಅಗಲಿರುವ ಖ್ಯಾತ ನಿರ್ದೇಶಕ, ನಿರ್ಮಾಪಕ ಎಸ್ ಕೆ ಭಗವಾನ್ ಅವರ ಮೂಲ ಹೆಸರಿದು!

ಮೈಸೂರು ಮೂಲದ ಭಗವಾನ್ ಹೊಟ್ಟೆಪಾಡಿಗಾಗಿ ರಂಗಭೂಮಿ ಸೇರಿದ್ದು, ಆ ಬಳಿಕ ಸಿನಿ ಲೋಕಕ್ಕೆ ಎಂಟ್ರಿ ಪಡೆದ ಕತೆ ಕುತೂಹಲಕರ. ಸಿನಿಮಾ ಮಂದಿರದ ಗೇಟ್ ಕೀಪರ್ ಕೆಲಸದಿಂದ ಹಿಡಿದು ಸೂಪರ್ ಸ್ಟಾರ್ ಡಾ. ರಾಜ್ ಕುಮಾರ್ ಅವರ ಹಲವಾರು ಹಿಟ್ ಚಿತ್ರಗಳ ನಿರ್ದೇಶನದ ತನಕ ಭಗವಾನ್ ಸಾಗಿ ಬಂದ ಹಾದಿ ಸ್ಫೂರ್ತಿದಾಯಕ.

ಭಗವಾನ್ ಅವರ ತಂದೆ ಆ ಕಾಲದ ಹೈಕೋರ್ಟ್ ಎನಿಸಿದ್ದ ಮೈಸೂರು ಕೋರ್ಟ್ ಮುಂದೆ ಅರ್ಜಿ ಬರೆಯುವ ಕೆಲಸ ಮಾಡುತ್ತಿದ್ದರು. ಹಾಗಾಗಿ ಅವರಿಗೆ ವೆಂಡರ್ ಕೃಷ್ಣಸ್ವಾಮಿ ಅಯ್ಯಂಗಾರ್ ಎಂದೇ ಕರೆಯಲಾಗುತ್ತಿತ್ತು. ತಂದೆಯ ನಿಧನದ ನಂತರ ಇವರ ಹಿರಿಯ ಸಹೋದರರು ಮತ್ತು ಸೋದರ ಮಾವನ ಸುಪರ್ದಿಯಲ್ಲಿ ಶ್ರೀನಿವಾಸ (ಭಗವಾನ್) ಬೆಳೆದರು. ಹಿರಿಯ ಸಹೋದರರೊಬ್ಬರು ಉದ್ಯೋಗ ನಿಮಿತ್ತ ಬೆಂಗಳೂರಿಗೆ ಆಗಮಿಸದ ಕಾರಣ, ಬಾಲಕ ಭಗವಾನ್ ಕೂಡ ಬೆಂಗಳೂರಿಗೆ ಬಂದು ಇಂಗ್ಲಿಷ್ ಮೀಡಿಯಂ ಶಾಲೆ ಸೇರಿದರು.

ಮುಂದೆ ಕಾಲೇಜು ಸೇರಿದಾಗ ಜಿ ವೆಂಕಟಸುಬ್ಬಯ್ಯರಂಥ ಗುರುಗಳು ಮತ್ತು ಜಿ ವಿ ಅಯ್ಯರ್ ರಂಥ ರಂಗಕರ್ಮಿಗಳ ಸಾಮಿಪ್ಯ ದೊರೆಯಿತು. ಕಾಲೇಜು ವಾರ್ಷಿಕೋತ್ಸವ ಸಂದರ್ಭದಲ್ಲಿ ಕೈಲಾಸಂ ಅವರ ‘ಟೊಳ್ಳುಗಟ್ಟಿ’ ನಾಟಕದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿದರು. ಕಾಲೇಜು ದಿನಗಳ ಪರಿಚಿತ ಮಾ. ಹಿರಣ್ಣಯ್ಯ ಅವರು ಭಗವಾನ್ ಅವರ ಸ್ತ್ರೀ ಪಾತ್ರದ ಜನಪ್ರಿಯತೆಯ ಬಗ್ಗೆ ತಮ್ಮ ತಂದೆ ಹಿರಣ್ಣಯ್ಯ ಅವರ ಗಮನ ಸೆಳೆದರು. ಇದು ವೃತ್ತಿ ರಂಗಭೂಮಿಗೆ ಭಗವಾನ್ ಕಾಲಿರಿಸಲು ಕಾರಣವಾಯಿತು.

ಇದನ್ನೂ ಓದಿ: SK Bhagavan: ಭಗವಾನ್‌ ನಿಧನಕ್ಕೆ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರಿಂದ ಸಂತಾಪ

SK Bhagavan

ನಾಟಕದಲ್ಲಿ ವಿಮಲೆಯ ಪಾತ್ರ

ದಿನಾ ಕಾಲೇಜು ಮುಗಿದ ಬಳಿಕ ಸಂಜೆ 6.30ಕ್ಕೆ ನಮ್ಮ ನಾಟಕ ನೋಡಲು ಬಾ ಎಂದು ಹಿರಣ್ಣಯ್ಯ ಸೂಚಿಸಿದರು. ಕೆಲ ದಿನಗಳ ಬಳಿಕ ಇವರಿಗೆ ಜಡ್ಜ್ ಪಾತ್ರ ಕೊಟ್ಟರು. ಹಿರಣ್ಣಯ್ಯ ಮಿತ್ರ ಮಂಡಳಿ ನಾಟಕ ತಂಡ ಆ ದಿನಗಳಲ್ಲಿ ಪ್ರದರ್ಶಿಸುತ್ತಿದ್ದ ‘ದೇವತೆ’ ಎಂಬ ನಾಟಕದಲ್ಲಿ ಸುಬ್ಬಣ್ಣ ಎಂಬುವರು ವಿಮಲೆಯ ಪಾತ್ರ ಮಾಡುತ್ತಿದ್ದರು. ಅದೊಂದು ದಿನ ಅವರು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅವರು ಬಸ್ ತಪ್ಪಿಸಿಕೊಂಡಿದ್ದರು. ನಾಟಕ ಕಂಪನಿಯವರು ಕಂಗಾಲಾಗಿದ್ದಾಗ ಆಪದ್ಬಾಂಧವರಾಗಿ ಕಂಡಿದ್ದು ಭಗವಾನ್. ಇನ್ನೇನು ನಾಟಕ ಶುರುವಾಗಬೇಕು. ಯಾವ ಪ್ರಾಕ್ಟೀಸ್ ಕೂಡ ಮಾಡದೆ ವಿಮಲೆಯ ಪಾತ್ರ ಮಾಡಲು ಭಗವಾನ್ ಒಪ್ಪಿದರು. ಅಷ್ಟೇ ಅಲ್ಲ ಆ ಪಾತ್ರವನ್ನು ಅದ್ಭುತವಾಗಿ ಮಾಡಿ ಹಿರಣ್ಣಯ್ಯ ಅವರ ಮನ ಗೆದ್ದರು. ಮರುದಿನ ಸುಬ್ಬಣ್ಣ ಬಂದರಾದರೂ ವಿಮಲೆಯ ಪಾತ್ರ ಮಾತ್ರ ಭಗವಾನ್ ಅವರಿಗೇ ಫಿಕ್ಸ್ ಆಯಿತು!

ಮತ್ತೊಂದು ನಾಟಕ ಕಂಪನಿಯ ಆಫರ್

ಈ ನಡುವೆ, ಸೂರಿ ಎಂಬ ಮತ್ತೊಂದು ನಾಟಕ ಕಂಪನಿಯವರೊಬ್ಬರು ಬಂದು ಕೈಗೆ ನೋಟುಗಳನ್ನು ಇಟ್ಟು, ಇನ್ನು ನಮ್ಮ ನಾಟಕ ಕಂಪನಿಯಲ್ಲಿ ನೀವೇ ಸ್ತ್ರೀ ಪಾತ್ರ ಮಾಡಬೇಕು ಎಂದು ಬಿಟ್ಟರು. ನೋಡಿದರೆ 300 ರೂ.ಗಳ ಮೂರು ನೋಟು! ಆ ದಿನಗಳಲ್ಲಿ ದೊಡ್ಡ ಮೊತ್ತ ಇದು. ನೂರರ ಮೂರು ನೋಟುಗಳನ್ನು ಕಂಡು ಭಗವಾನ್ ಗೆ ಮೂರ್ಛೆ ಹೋಗುವಂತಾಗಿತ್ತು!

ಕೆ ಆರ್ ಪೇಟೆಗೆ ಹೋಗಿ‌ ಹೊಸ ನಾಟಕ ಕಂಪನಿ ಸೇರಿಕೊಂಡರು. ವಿಶ್ವಾಮಿತ್ರ ನಾಟಕದ ಗಾಯತ್ರಿ ಪಾತ್ರ ಇವರಿಗಾಗಿ ಕಾದಿತ್ತು. ಅದೇ ವೇಳೆ ಅಲ್ಲಿ ಜಿ ವಿ ಅಯ್ಯರ್ ಮತ್ತು ಬಾಲಕೃಷ್ಣ ಅವರು ಬೇಡರ ಕಣ್ಣಪ್ಪ ನಾಟಕ ಬರೆಯತೊಡಗಿದ್ದರು. ಜಿ ವಿ ಅಯ್ಯರ್ ಬರೆದ ಕಚ್ಚಾ ಕಾಪಿಯನ್ನು ಪಕ್ಕಾ ಕಾಪಿ ಮಾಡುವ ಕೆಲಸವನ್ನು ಮೊದಲು ಭಗವಾನ್ ಗೆ ಒಪ್ಪಿಸಲಾಯಿತು. ಭಗವಾನ್ ಕೆಲವು ದಿನ ಅಲ್ಲಿ ಪಾತ್ರ ನಿರ್ವಹಿಸಿ ಮನೆಗೆ ಮರಳಿದರು.

ಮಾವ ಕೂಡಿ ಹಾಕಿ ಬೆಲ್ಟ್‌ನಿಂದ ಬಾರಿಸಿದರು!

ಸಹೋದರಿಯ ಮದುವೆಗೆಂದು ಊರಿಗೆ ಮರಳಿದಾಗ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಸೋದರ ಮಾವನ ಕೆಂಗಣ್ಣಿಗೆ ಗುರಿಯಾದರು. ಇವರನ್ನು ಕೋಣೆಯಲ್ಲಿ ಕೂಡಿ ಹಾಕಿದ ಸೋದರ ಮಾವ, ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಬಾರಿಸಿ, ”ಇನ್ನೊಮ್ಮೆ ನಾಟಕ ಗೀಟಕ ಅಂದರೆ ಸಾಯಿಸಿ ಬಿಡ್ತೇನೆ. ಮೊದಲು ಓದು ಮುಗಿಸಿ ಒಳ್ಳೆಯ ಉದ್ಯೋಗ ಹುಡುಕು” ಎಂದು ವಾರ್ನ್ ಮಾಡಿದರು! ಅಲ್ಲಿಗೆ ನಾಟಕದ ಅಂಕಕ್ಕೆ ತೆರೆ ಬಿತ್ತು!

SK Bhagavan

ಥಿಯೇಟರ್ ಗೇಟ್ ಕೀಪರ್ ಆಗಿದ್ದು ಹೇಗೆ?

ಕಾಲೇಜು ಶಿಕ್ಷಣ ಮುಗಿದ ಬಳಿಕ ಉದ್ಯೋಗದ ಬೇಟೆಗಿಳಿದರು. ಮನೆಯ ಬಳಿಯೇ ಇದ್ದ ಪರಿಚಿತರೊಬ್ಬರನ್ನು ಭೇಟಿಯಾಗಿ ಏನಾದರು ಉದ್ಯೋಗಕ್ಕೆ ಸಹಾಯ ಮಾಡಿ ಎಂದಾಗ, ಅವರು ತೋರಿಸಿದ್ದು ಪ್ರಕಾಶ್ ಪಿಕ್ಚರ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಕಚೇರಿಯ ದಾರಿ! ಈ ಮೂಲಕ ಮತ್ತೆ ಅವರು ಬಣ್ಣದ ಜಗತ್ತಿಗೆ ಕಾಲಿರಿಸುವಂತಾಯಿತು.

ಇದನ್ನೂ ಓದಿ: SK Bhagavan: ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್‌.ಕೆ. ಭಗವಾನ್ ಇನ್ನು ನೆನಪು ಮಾತ್ರ

ಚೆನ್ನೈ ಮೂಲದ ಪ್ರಕಾಶ್ ಪಿಕ್ಚರ್ಸ್ ಎಂಬ ವಿತರಣಾ ಸಂಸ್ಥೆಯ ಕೈಯಲ್ಲಿ ಆಗ ರಾಜಾ ವಿಕ್ರಮ, ನಟ ಶೇಖರ ಮತ್ತು ತೂಕು ತುಕ್ಕಿ ಎಂಬ ಮೂರು ಸೂಪರ್ ಹಿಟ್ ಚಿತ್ರಗಳಿದ್ದವು. ಕರ್ನಾಟಕದಲ್ಲಿ ಆ ಚಿತ್ರಗಳ ಕಲೆಕ್ಷನ್ ಮೇಲೆ ನಿಗಾ ಇಡುವುದು ಅದಕ್ಕೆ ಸವಾಲಾಗಿತ್ತು. ಚಿತ್ರ ಮಂದಿರಗಳಲ್ಲಿ ಕಲೆಕ್ಷನ್ ಲೆಕ್ಕ ಸರಿಯಾಗಿ ತೋರಿಸುತ್ತಿರಲಿಲ್ಲ. ಪ್ರತಿ ಶೋಗೆ ಎಷ್ಟು ಜನರಿದ್ದಾರೆ ಎಂಬ ಲೆಕ್ಕ ನೋಡುವ ಕೆಲಸವನ್ನು ಭಗವಾನ್ ಗೆ ಒಪ್ಪಿಸಲಾಯಿತು. ಇದು ಒಂಥರಾ ಗೇಟ್ ಕೀಪರ್ ಕೆಲಸವೇ ಆಗಿತ್ತು. ಈ ಕೆಲಸವನ್ನು ಭಗವಾನ್ ಶ್ರದ್ಧೆಯಿಂದ ಮಾಡಿದರು. ಈ ಕೆಲಸ ಮುಂದೆ ಅವರನ್ನು ಚೆನ್ನೈಯ ಸಿನಿಮಾ ಚಟುವಟಿಕೆಗಳ ಕೇಂದ್ರಕ್ಕೆ ಕೊಂಡೊಯ್ದಿತು. ಅಲ್ಲಿ ಕ್ಯಾಮೆರಾಮನ್ ದೊರೆ, ರಾಜ್ ಕುಮಾರ್ ಮುಂತಾದವರ ಪರಿಚಯವಾಯಿತು. ದೊರೆ ಜತೆ ಸೇರಿ ಡಾ. ರಾಜ್ ಕುಮಾರ್ ಸಿನಿಮಾಗಳನ್ನು ನಿರ್ದೇಶಿಸಲೂ ಇದು ದಾರಿ ತೋರಿಸಿತು.

Exit mobile version