ಬೆಂಗಳೂರು: ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಎಸ್.ಕೆ ಭಗವಾನ್ (SK Bhagavan) ಇನ್ನು ನೆನಪು ಮಾತ್ರ. ನಿರ್ದೇಶಕ, ನಿರ್ಮಾಪಕ ಎಸ್.ಕೆ. ಭಗವಾನ್ ಅವರು ನಿಧನರಾಗಿದ್ದಾರೆ. ಇದೀಗ ಡಾ. ರಾಜ್‌ಕುಮಾರ್ ಅವರಂತೆ ಎಸ್‌ಕೆ ಭಗವಾನ್ ಅವರು ನೇತ್ರ ದಾನ ಮಾಡಿದ್ದಾರೆ. ನಾರಾಯಣ ನೇತ್ರಾಲಯ ಸಿಬ್ಬಂದಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ʻʻಅಣ್ಣಾವ್ರ ರೀತಿ ಅವರ ಕಣ್ಣು ಕೂಡ ದಾನ ಆಗಿದೆ. 3ರಿಂದ 4 ಜನಕ್ಕೆ ಅವರ ಕಣ್ಣು ಹಾಕಲಿದ್ದೇವೆ. ಒಮ್ಮೆ ಆಸ್ಪತ್ರೆಗೆ ಭೇಟಿ ಮಾಡಿದ್ದಾಗ ಅವರು ನೇತ್ರ ದಾನ ಮಾಡುವುದಾಗಿ ಹೇಳಿದ್ದರು. ಅಣ್ಣಾವ್ರು ಕಣ್ಣು ಡೊನೇಷನ್‌ಗೆ ರಿಜಿಸ್ಟರ್ ಮಾಡಿದಾಗಲೇ ಅವರು ಮಾಡಿದ್ದರು. ಅವರ ಕಣ್ಣು ಯಾರಿಗೆ ಸರಿಹೊಂದುತ್ತದೆ ಎಂದು ನೋಡಿ ಕಣ್ಣು ದಾನ ಆಗುತ್ತದೆʼʼ ಎಂದು ನೇತ್ರಾಲಯ ಸಿಬ್ಬಂದಿ ಹೇಳಿಕೆ ನೀಡಿದೆ.
ʻಮಂತ್ರಾಲಯ ಮಹಾತ್ಮೆʼ ಸಿನಿಮಾ ಕಲರ್ ಪ್ರಿಂಟ್ ಆಗಬೇಕೆಂಬ ಮಹದಾಸೆ
ರಾಘವೇಂದ್ರ ರಾಜಕುಮಾರ್ ಮಾತನಾಡಿ ʻʻನನ್ನ ತಂದೆ ನಂತರ ಶಿಸ್ತಿನ ವ್ಯಕ್ತಿ ಅಂದರೆ ಭಗವಾನ್ ಅವರು. ಅವರ ಶಿಸ್ತು ಎಲ್ಲರಿಗೂ ರೋಲ್ ಮಾಡೆಲ್. ನಮ್ಮ ತಂದೆಗಿಂತ 4 ವರ್ಷ ಚಿಕ್ಕವರು. ನಮ್ಮ ತಂದೆಯನ್ನು ಕಳೆದುಕೊಂಡಷ್ಟೇ ನೋವು ಇದೆ. ಅವರ ಕಣ್ಣುಗಳು ದಾನವಾಗಿವೆ. ಭಗವಾನ್ ಅವರನ್ನು ನಾನು ಮಾವ ಅಂತ ಕರೆಯುತ್ತಿದ್ದೆ. ʻಮಂತ್ರಾಲಯ ಮಹಾತ್ಮೆʼ ಸಿನಿಮಾ ಕಲರ್ ಪ್ರಿಂಟ್ ಆಗಬೇಕು ಎಂದು ಅವರ ಆಸೆಯಾಗಿತ್ತು. ಅದನ್ನು ಕಲರ್ ಮಾಡಿಸುತ್ತೇವೆ. ಅವರ ಆಶೀರ್ವಾದ ಚಿತ್ರರಂಗದ ಮೇಲಿರಲಿʼʼಎಂದರು.
ಇದನ್ನೂ ಓದಿ: SK Bhagavan: ಡಾ.ರಾಜ್ ಜತೆ ಎಸ್.ಕೆ. ಭಗವಾನ್ ನಂಟು: ನಿರ್ದೇಶಕರ ಸಿನಿ ಜರ್ನಿ ಹೇಗಿತ್ತು?
ಅಂತ್ಯಸಂಸ್ಕಾರ ಎಲ್ಲಿ?
ನಿರ್ದೇಶಕ ಭಗವಾನ್ ಅವರ ಪಾರ್ಥಿವ ಶರೀರವನ್ನು ಫೆ.20 ಮಧ್ಯಾಹ್ನ 12 ಗಂಟೆವರೆಗೂ ಸಹಕಾರ ನಗರದ ನಿವಾಸದಲ್ಲಿ ಇಡಲಾಗುತ್ತದೆ. 12.30ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: SK Bhagavan: ಖ್ಯಾತ ಚಿತ್ರ ನಿರ್ದೇಶಕ ಎಸ್.ಕೆ. ಭಗವಾನ್ ಇನ್ನಿಲ್ಲ
1993ರಲ್ಲಿ ದೊರೈರಾಜ್ ನಿಧನದ ನಂತರ ಚಿತ್ರನಿರ್ದೇಶನಕ್ಕೆ ವಿದಾಯ ಹೇಳಿದರು. ಸುಮಾರು 49 ಚಿತ್ರಗಳನ್ನು ನಿರ್ದೇಶಿಸಿದ ಈ ಜೋಡಿಯ 32 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕನಟರಾಗಿ ನಟಿಸಿದ್ದು ವಿಶೇಷ. ಸಾಮಾಜಿಕ ಕಳಕಳಿ ಹೊಂದಿದ್ದ ಇವರು 24 ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳಿದ ನಂತರ `ಆದರ್ಶ ಸಿನಿಮಾ ಇನ್ಸ್ಟಿಟ್ಯೂಟ್’ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದು ರಾಜನ್-ನಾಗೇಂದ್ರ ಜೋಡಿ.