ಬೆಂಗಳೂರು: ಗಾಯಕ ಸೋನು ನಿಗಮ್ (Sonu Nigam) ಅವರ ತಂದೆ ಆಗಮ್ ಕುಮಾರ್ ನಿಗಮ್ ಅವರ ಮಾಜಿ ಚಾಲಕನ ವಿರುದ್ಧ ಕಳ್ಳತನ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಸೋನು ನಿಗಮ್ ತಂದೆ ವಾಸವಿರುವ ಮನೆಯಲ್ಲಿ ನಡೆದ 72 ಲಕ್ಷ ರೂ. ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋನು ನಿಗಮ್ ತಂದೆ ಆಗಮ್‌ಕುಮಾರ್ ನಿಗಮ್ ಅವರ ಮಾಜಿ ಕಾರು ಚಾಲಕನನ್ನು ಬಂಧಿಸಿದ್ದಾರೆ. ಅಂಧೇರಿಯ ವಿಂಡ್ಸರ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿರುವ ಆಗಮ್ ಕುಮಾರ್ ನಿಗಮ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.
ಈ ನಿವಾಸದಲ್ಲಿ ಮಾರ್ಚ್ 19 ಮತ್ತು ಮಾರ್ಚ್ 20ರ ನಡುವೆ ಕಳ್ಳತನ ನಡೆದಿದೆ. ಅಂಧೇರಿಯಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ಆಗಮ್ ಕುಮಾರ್ ನಿಗಮ್ ಮನೆಯಲ್ಲಿ ಇಲ್ಲದಿದ್ದಾಗ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಸೋನು ನಿಗಮ್ ಸಹೋದರಿ ನಿಕಿತಾ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಕೂಡಲೇ ಕ್ರಮ ಕೈಗೊಂಡಿದ್ದಾರೆ.
ಸೋನು ನಿಗಮ್ ಅವರ ತಂಗಿ ನಿಕಿತಾ ಅವರು ಬುಧವಾರ (ಮಾರ್ಚ್ 22) ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮುಂಜಾನೆ ಓಶಿವಾರಾ ಪೊಲೀಸ್ ಠಾಣೆಯಲ್ಲಿ (Oshiwara police station) ದೂರು ದಾಖಲಿಸಿದ್ದರು. ದೂರಿನ ಪ್ರಕಾರ, ಆಗಮಕುಮಾರ್ ನಿಗಮ್ ಅವರು ಸುಮಾರು 8 ತಿಂಗಳಿನಿಂದ ರೆಹಾನ್ ಎಂಬ ಕಾರು ಚಾಲಕನನ್ನು ಇರಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಆತನನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ವರದಿಗಳ ಪ್ರಕಾರ, ನಿಕಿತಾ ಹೇಳಿಕೆಯಂತೆ ʻʻತನ್ನ ತಂದೆ ರೆಹಾನ್ ಎಂಬ ಚಾಲಕನನ್ನು ನೇಮಿಸಿಕೊಂಡಿದ್ದರು. ಆದರೆ ಆತನನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ರೆಹಾನ್ ಸುಮಾರು 8 ತಿಂಗಳು ಕೆಲಸ ಮಾಡಿದ್ದರು. ಭಾನುವಾರದಂದು ನನ್ನ ತಂದೆ ವರ್ಸೊವಾದಲ್ಲಿನ ನನ್ನ ಮನೆಗೆ ಭೇಟಿ ನೀಡಿದ್ದಾಗಿ ಮತ್ತು ನಂತರ ವಿಂಡ್ಸರ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್‌ಗೆ ಮರಳಿದ್ದಾಗಿʼʼ ನಿಕಿತಾ ಹಂಚಿಕೊಂಡಿದ್ದಾರೆ. ಅದೇ ದಿನ ಸಂಜೆ ಆಗಮ್ ಕುಮಾರ್ ನಿಗಮ್ ಅವರು ನಿಕಿತಾ ಅವರಿಗೆ ಕರೆ ಮಾಡಿ 40 ಲಕ್ಷ ರೂ. ಡಿಜಿಟಲ್ ಲಾಕರ್‌ನಿಂದ ಹಣ ನಾಪತ್ತೆಯಾಗಿದೆ ಎಂದರು. ಮರುದಿನ, ಆಗಮಕುಮಾರ್ ನಿಗಮ್ ವೀಸಾ ಸಂಬಂಧಿತ ಕೆಲಸದ ನಿಮಿತ್ತ 7 ಬಂಗಲೆ ಬಳಿ ಇರುವ ಮಗನ ಮನೆಗೆ ಹೋಗಿ ಸಂಜೆ ಮರಳಿದ್ದರು. ನಂತರ ಬಂದು ನೋಡಿದಾಗ ಡಿಜಿಟಲ್ ಲಾಕರ್‌ನಿಂದ ಮತ್ತೆ 32 ಲಕ್ಷ ರೂ. ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ನಂತರ ಆಗಮ್‌ಕುಮಾರ್ ಹಾಗೂ ನಿಕಿತಾ ತಾವಿರುವ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಮಾಜಿ ಕಾರು ಚಾಲಕ ರೆಹಾನ್ ಎರಡು ದಿನವೂ ಫ್ಲಾಟ್‌ನಿಂದ ಬ್ಯಾಗನ್ನು ಹಿಡಿದು ತೆರಳುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ: Attack on Sonu Nigam: ಸೆಲ್ಫಿಗಾಗಿ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ ಮಾಡಿದ ಶಾಸಕನ ಪುತ್ರ ಮತ್ತು ಅಳಿಯ
ರೆಹಾನ್ ತನ್ನ ಫ್ಲ್ಯಾಟ್‌ಗೆ ನಕಲಿ ಕೀ ಸಹಾಯದಿಂದ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಡಿಜಿಟಲ್ ಲಾಕರ್‌ನಿಂದ 72 ಲಕ್ಷ ರೂ. ಕದ್ದಿದ್ದಾನೆ ಎಂದು ಆಗಮ್‌ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಅವರ ಪುತ್ರಿ ನಿಕಿತಾ ಓಶಿವಾರ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 380, 454 ಮತ್ತು 457 ರ ಅಡಿಯಲ್ಲಿ ಕಳ್ಳತನ ಮತ್ತು ಮನೆಗೆ ಅತಿಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ದೂರು ದಾಖಲಿಸಲಾಗಿದೆ.
ಮುಂಬಯಿಯಲ್ಲಿ ಹಲ್ಲೆಗೊಳಗಾಗಿ ಸುದ್ದಿಯಾಗಿದ್ದ ಸೋನು ನಿಗಮ್
ಗಾಯಕ ಸೋನು ನಿಗಮ್(Sonu Nigam) ಅವರ ಮೇಲೆ ಮುಂಬಯಿಯಲ್ಲಿ ಶಿವಸೇನೆ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಪುತ್ರ ಮತ್ತು ಅಳಿಯ ಹಲ್ಲೆಗೆ ಮುಂದಾಗಿದ್ದ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಇಲ್ಲಿನ ಚೆಂಬೂರಿನ ಸಾಂಸ್ಕೃತಿಕ ಉತ್ಸವದಲ್ಲಿ ಲೈವ್ ಕಾನ್ಸರ್ಟ್ ನಡೆಸುತ್ತಿದ್ದ ಸೋನು ನಿಗಮ್ ಜತೆಗೆ, ಶಿವಸೇನೆ ಶಾಸಕ ಪ್ರಕಾಶ್ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ಮತ್ತು ಸೋದರಳಿಯ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಆಗ ಸೋನು ಅವರ ಅಂಗರಕ್ಷಕರು ಅವರನ್ನು ತಡೆದಿದ್ದಾರೆ. ಆಗ ಕೋಪಗೊಂಡ ಮಗ ಮತ್ತು ಅಳಿಯ ಹಲ್ಲೆ ನಡೆಸಿದ್ದರು. ಅಂದಹಾಗೇ, ಈ ಸೋನು ನಿಗಮ್ ಅವರ ಸಂಗೀತ ಉತ್ಸವವನ್ನು ಆಯೋಜಿಸಿದ್ದೂ ಕೂಡ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರೇ ಆಗಿದ್ದರು. ಇಷ್ಟೆಲ್ಲ ಆದ ಬಳಿಕ ಶಾಸಕ ಪ್ರಕಾಶ್ ಪುತ್ರಿ ಸುಪ್ರದಾ ಫಾಟರ್‌ಪೇಕರ್ ಅವರು ಟ್ವೀಟ್ ಮಾಡಿ ಕ್ಷಮೆ ಯಾಚಿಸಿದ್ದರು.