Site icon Vistara News

Sonu Srinivas Gowda: ಸೋನು ಗೌಡ ದತ್ತು ಪಡೆದ ಪ್ರಕರಣ; ರಾಯಚೂರಿನಲ್ಲಿ ಸ್ಥಳ ಮಹಜರು

sonu gowda

sonu gowda

ಬೆಂಗಳೂರು: ಸೋಷಿಯಲ್‌ ಮೀಡಿಯಾ ತಾರೆ,  ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು 7 ವರ್ಷದ, ರಾಯಚೂರು ಮೂಲದ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಸದ್ಯ ವಿವಾದ ಹುಟ್ಟು ಹಾಕಿದೆ. ದತ್ತು ತೆಗೆದುಕೊಳ್ಳುವಾಗ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋನು ಗೌಡ ವಿರುದ್ಧ ದೂರ ದಾಖಲಾಗಿತ್ತು. ಅದರಂತೆ ಮಾರ್ಚ್‌ 22ರಂದು ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದಾರೆ. ಇಂದು (ಮಾರ್ಚ್‌ 24) ಪೊಲೀಸರು ಅವರನ್ನು ರಾಯಚೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ತರಾಟೆ ತೆಗೆದುಕೊಂಡ ಗ್ರಾಮಸ್ಥರು

ಸೋನು ಗೌಡ ಅವರನ್ನು ಮಗುವಿನ ಊರಾದ ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರ ಗ್ರಾಮಕ್ಕೆ ಕರೆತಂದ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ನಡೆಸಿದರು. ಮಗು ಪಡೆದುಕೊಂಡು ಹೋದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಬಾಲಕಿಯನ್ನ ಗ್ರಾಮದಿಂದ ಕರೆದುಕೊಂಡು ಹೋಗಿದ್ದರ ಬಗ್ಗೆ ಪೊಲೀಸರು ವಿಚಾರಣೆಯನ್ನೂ ನಡೆಸಿದರು. ಈ ವೇಳೆ ಗುಂಪುಗೂಡಿದ ಗ್ರಾಮಸ್ಥರು ಸೋನು ಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಬಾಲಕಿಯ ಹೆತ್ತವರ ವಿಚಾರಣೆ

ಈ ಮಧ್ಯೆ ಅಪ್ರಾಪ್ತ ಬಾಲಕಿಯ ಹೆತ್ತವರನ್ನು ಬ್ಯಾಡರಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾರೆ. ಯಾಕೆ ದತ್ತು ಕೊಟ್ಟಿದ್ದು, ಹಣಕ್ಕಾಗಿ ಮಗುವನ್ನು ನೀಡಲಾಗಿದೆಯೇ ಮುಂತಾದ ವಿವರಗಳನ್ನು ಪೊಲೀಸರು ಕಲೆ ಹಾಕಲಿದ್ದಾರೆ.

ಏನಿದು ಪ್ರಕರಣ?

ದತ್ತು ತೆಗೆದುಕೊಳ್ಳಬೇಕಾದರೆ‌ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ ಇಲ್ಲಿ ಮಗುವಿಗೆ 8 ವರ್ಷ ಮತ್ತು ಸೋನು ಗೌಡಗೆ 26 ವರ್ಷ. ಹೀಗಾಗಿ ಅದು ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಇನ್ನು ರೀಲ್ಸ್‌ ಮಾಡುವ ಉದ್ದೇಶದಿಂದ ಸೋನು ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾರೆಂಬ ಆರೋಪ ಕೂಡ ಇದೆ. ಮಕ್ಕಳ ಕಲ್ಯಾಣ ಸಮಿತಿ ಈ ಎಲ್ಲ ಆಧಾರದ ಮೇಲೆ ಸೋನು ವಿರುದ್ಧ ದೂರು ದಾಖಲಿಸಿದೆ.

ಮಗುವಿನ ತಂದೆ ತಾಯಿಗೆ ಏಕೆ ನೋಟಿಸ್‌?

ತಾವು ಮಗುವನ್ನು ಹೆತ್ತರೂ ಅದನ್ನು ಬೇರೆಯವರಿಗೆ ವಹಿಸಬೇಕಾದರೆ ಕಾನೂನಿನ ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ಪಾಲಿಸುವುದು ಕಡ್ಡಾಯ. ಆದರೆ ಈ ಪ್ರಕರಣದಲ್ಲಿ ಇಂತಹ ಯಾವುದೇ ನಿಯಮಗಳ ಪಾಲನೆ ಆಗಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಅಧಿಕಾರಿಗಳು ಮಗುವನ್ನು ದತ್ತು ಕೊಟ್ಟಿದ್ದಕ್ಕೆ ಕಾರಣ ಕೇಳಿ ನೋಟಿಸ್‌ ಕಳುಹಿಸಿದ್ದರು. ಅದರಂತೆ ಹೆತ್ತವರು ನಿನ್ನೆ ರಾಯಚೂರಿನಿಂದ ಹೊರಟು ಇಂದು ಬೆಂಗಳೂರು ತಲುಪಿದ್ದರು.

ಇದನ್ನೂ ಓದಿ: Sonu Srinivas Gowda: ಸೋನು ಗೌಡ ದತ್ತು ಪಡೆದ ಪ್ರಕರಣ; ಮಗುವಿನ ಪಾಲಕರಿಗೂ ಸಂಕಷ್ಟ; ಕಾನೂನು ಏನು ಹೇಳುತ್ತದೆ?

ಸದ್ಯ ಸೋನು ಗೌಡ (Sonu Srinivas Gowda) ಅವರನ್ನು ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಹೀಗಾಗಿ ಅವರನ್ನು ಪೊಲೀಸರು ಕೋರ್ಟ್‌ನಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ಸೋಮವಾರ (ಮಾರ್ಚ್‌ 25) ಮತ್ತೆ ಕೋರ್ಟ್​ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version