ಬೆಂಗಳೂರು: ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಇಂದು (ಏ. 14) ಮಹಾಲಕ್ಷ್ಮೀ ಲೇಔಟ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಸೌಂದರ್ಯ ಜಗದೀಶ್ ಅವರ ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಬರಲಾಗಿದೆ. ಬಳಿಕ ಸ್ಯಾಂಡಲ್‌ವುಡ್ ನಟ ದರ್ಶನ್ ಸಹಿತ ಅನೇಕ ಕಲಾವಿದರು ಆಗಮಿಸಿದ ಅಂತಿಮ ದರ್ಶನ ಪಡೆದುಕೊಂಡರು.
ಇತೀಚೆಗಷ್ಟೇ ಎಡಗೈ ಸರ್ಜರಿಗೆ ಒಳಗಾಗಿದ್ದ ದರ್ಶನ್ ಆಗಮಿಸಿ ಸೌಂದರ್ಯ ಜಗದೀಶ್ ಅವರಿಗೆ ಕಂಬನಿ ಮಿಡಿದರು. ಒಂದು ತಿಂಗಳು ವಿಶ್ರಾಂತಿ ಅಗತ್ಯ ಎಂದು ವೈದ್ಯರು ಹೇಳಿದ್ದರೂ ಆಗಮಿಸಿದ ದರ್ಶನ್ ಅಂತಿಮ ನಮನ ಸಲ್ಲಿಸಿದರು. ದರ್ಶನ್ ಮಾತ್ರವಲ್ಲ ಚಿತ್ರರಂಗದ ಗಣ್ಯರಾದ ಶ್ರೀನಗರ ಕಿಟ್ಟಿ, ಶ್ರೀಮುರಳಿ, ದರ್ಶನ್, ಉಪೇಂದ್ರ, ಗುರುಕಿರಣ್, ತರುಣ್ ಸುಧೀರ್, ಸಾರಾ ಗೋವಿಂದು, ಕೆ.ಮಂಜು ಮುಂತಾದವರು ಬಂದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನಾಳೆ (ಏಪ್ರಿಲ್ 15) ಸೌಂದರ್ಯ ಜಗದೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ. ಹೀಗಾಗಿ ನಾಳೆ ಬೆಳಗ್ಗೆ 9 ಗಂಟೆವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಕಾರಣವೇನು?
ಈ ಬಗ್ಗೆ ಡಿಸಿಪಿ ಸೈಯದ್ ಉಲ್ಲಾ ಅದಾವತ್ ಮಾಧ್ಯಮದ ಜತೆ ಮಾತನಾಡಿ ʻʻಬೆಳಗ್ಗೆ 9.45ಕ್ಕೆ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವರ ಮಡದಿ ಈಗಾಗಲೇ ದೂರು ಕೊಟ್ಟಿದ್ದಾರೆ. ಮಡದಿ ಕೂಡ ಇದು ಸೂಸೈಡ್ ಎಂದು ಕ್ಲೀಯರ್ ಕಟ್ ಆಗಿಯೇ ಹೇಳಿದ್ದಾರೆ. ಇತ್ತೀಚಿಗೆ ಸೌಂದರ್ಯ ಜಗದೀಶ್ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರು. ಅತ್ತೆ ಜತೆ ತುಂಬ ಅಟಾಚ್‌ಮೆಂಟ್ ಹೊಂದಿದ್ದರು. ಅತ್ತೆಯ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ನಾವು ಕೇಸ್ ದಾಖಲಿಸಿಕೊಂಡು ತನಿಖೆ ಮಾಡುತ್ತ ಇದ್ದೇವೆʼʼ ಎಂದು ಹೇಳಿದ್ದಾರೆ.
ಮೊದಲಿಗೆ ಸೌಂದರ್ಯ ಜಗದೀಶ್ ಅವರು ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಈ ಬಗ್ಗೆ ಸೌಂದರ್ಯ ಜಗದೀಶ್ ಅವರ ಸ್ನೇಹಿತ ಶ್ರೇಯಸ್ ಪ್ರತಿಕ್ರಿಯಿಸಿ, ʻʻಸೌಂದರ್ಯ ಜಗದೀಶ್ ಅವರಿಗೆ ಯಾವುದೇ ಆರೋಗ್ಯ ಸಂಬಂಧಿ ಕಾಯಿಲೆ ಇರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜ. ಕೂಡಲೇ ನಾವು ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದರು. ಈಗಲೇ ನಾವು ಏನು ಎಂಬುದನ್ನು ಹೇಳಲು ಆಗಲ್ಲ. ಹೃದಯಾಘಾತ ಆಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾಂಕ್ ನೋಟಿಸ್ಗೂ ಆತ್ಮಹತ್ಯೆಗೂ ಸಂಬಂಧ ಇಲ್ಲʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Soundarya Jagadish: ಖ್ಯಾತ ನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ಚಿತ್ರ ನಿರ್ಮಾಣದ ಜತೆಗೆ ಉದ್ಯಮಿ, ಬಿಲ್ಡರ್ ಕೂಡ ಆಗಿರುವ ಸೌಂದರ್ಯ ಜಗದೀಶ್ ʻಅಪ್ಪು ಆ್ಯಂಡ್ ಪಪ್ಪು, ʻಮಸ್ತ್ ಮಜಾ ಮಾಡಿʼ, ʻರಾಮ್‌ಲೀಲಾʼ, ʻಸ್ನೇಹಿತರುʼ ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಅವರ ಮಗಳ ಮದುವೆಯನ್ನು ನೆರವೇರಿಸಿದ್ದರು.