Site icon Vistara News

A.R.Rahman: ಎಐ ತಂತ್ರಜ್ಞಾನ ಬಳಸಿ ದಿವಂಗತ ಗಾಯಕರ ಧ್ವನಿ ಮರು ಸೃಷ್ಟಿಸಿದ ರೆಹಮಾನ್ ಹೇಳಿದ್ದೇನು?

ar rahman

ar rahman

ಮುಂಬೈ: ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್‌.ರೆಹಮಾನ್ ಅವರು ರಜನಿಕಾಂತ್‌ ಅಭಿನಯದ ತಮಿಳು ಚಿತ್ರ ʼಲಾಲ್‌ ಸಲಾಂʼಗಾಗಿ ಕೃತಕ ಬುದ್ಧಿಮತ್ತೆಯ ಮೊರೆ ಹೋಗಿದ್ದಾರೆ (Artificial Intelligence). ಎಐ ತಂತ್ರಜ್ಞಾನ ಬಳಸಿ ‘ತಿಮಿರಿ ಯೆಜುಡಾ’ ಎಂಬ ಹಾಡಿಗಾಗಿ ದಿವಂಗತ ಗಾಯಕರಾದ ಬಾಂಬಾ ಬಕ್ಯಾ ಮತ್ತು ಶಾಹುಲ್ ಹಮೀದ್ ಅವರ ಧ್ವನಿಯನ್ನು ಮರುಸೃಷ್ಟಿಸಿದ್ದಾರೆ. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಎ.ಆರ್‌.ರೆಹಮಾನ್ ಸ್ಪಷ್ಟನೆ ನೀಡಿದ್ದಾರೆ. ʼʼಗಾಯಕರ ಕುಟುಂಬಗಳ ಅನುಮತಿ ಪಡೆದೇ ಧ್ವನಿಯನ್ನು ಮರುಸೃಷ್ಟಿಸಲಾಗಿದೆ. ಅಲ್ಲದೆ ಸೂಕ್ತ ಸಂಭಾವನೆಯನ್ನು ಗಾಯಕರ ಕುಟುಂಬಕ್ಕೆ ನೀಡಲಾಗಿದೆʼʼ ಎಂದು ಹೇಳಿದ್ದಾರೆ.

ಎ.ಆರ್‌.ರೆಹಮಾನ್ ಹೇಳಿದ್ದೇನು?

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಎ.ಆರ್‌.ರೆಹಮಾನ್ ಪ್ರತಿಕ್ರಿಯೆ ನೀಡಿದ್ದಾರೆ. ದಿವಂಗತ ಗಾಯಕರ ಧ್ವನಿಯನ್ನು ಮರುಸೃಷ್ಟಿಸಲು ಎಐ ತಂತ್ರಜ್ಞಾನವನ್ನು ಹೇಗೆ ಬಳಸಲಾಗಿದೆ ಎನ್ನುವುದನ್ನು ವಿವರಿಸುವ ಸೋನಿ ಮ್ಯೂಸಿಕ್ ಸೌತ್‌ನ ಪೋಸ್ಟ್ ಅನ್ನು ಎ.ಆರ್.ರೆಹಮಾನ್ ಮಂಗಳವಾರ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಧ್ವನಿ ಬಳಸಲು ನಾವು ಗಾಯಕರ ಕುಟುಂಬಗಳಿಂದ ಅನುಮತಿ ಪಡೆದಿದ್ದೇವೆ. ಮಾತ್ರವಲ್ಲ ಅವರ ಧ್ವನಿ ಮಾದರಿ ಬಳಸಿದ್ದಕ್ಕಾಗಿ ಅರ್ಹ ಸಂಭಾವನೆಯನ್ನು ನೀಡಿದ್ದೇವೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಅದು ಅಪಾಯಕಾರಿಯಲ್ಲʼʼ ಎಂದು ಬರೆದುಕೊಂಡಿದ್ದಾರೆ.

ರೆಹಮಾನ್ ಅವರು ಸಂಗೀತ ಸಂಯೋಜಿಸಿದ್ದ ಅನೇಕ ಹಾಡುಗಳಿಗೆ ಗಾಯಕ ಬಾಂಬಾ ಬಕ್ಯಾ ಧ್ವನಿಯಾಗಿದ್ದರು. 2010ರಲ್ಲಿ ತೆರೆಕಂಡ ʼರಾವಣನ್‌ʼ ಚಿತ್ರದ ಹಾಡಿನ ಮೂಲಕ ಅವರು ಬಣ್ಣದ ಲೋಕ ಪ್ರವೇಶಿಸಿದ್ದರು. ರೆಹಮಾನ್‌ ಸಂಗೀತ ನೀಡಿದ್ದ ಆ ಸಿನಿಮಾದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದವು. ಬಳಿಕ ತಮಿಳು-ತೆಲುಗು ಸೇರಿ 12ಕ್ಕೂ ಹೆಚ್ಚು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದರು. 2022ರಲ್ಲಿ ತಮ್ಮ 42ನೇ ವಯಸ್ಸಿನಲ್ಲಿ ಬಾಂಬಾ ಬಕ್ಯಾ ಹೃದಯಾಘಾತದಿಂದ ನಿಧನರಾದರು. ಕೊನೆಯ ಬಾರಿ ಅವರು ರೆಹಮಾನ್‌ ಸಂಗೀತ ನಿರ್ದೇಶನದ ʼಪೊನ್ನಿಯಿನ್‌ ಸೆಲ್ವನ್‌ 1ʼ ಸಿನಿಮಾಕ್ಕಾಗಿ ಹಾಡಿದ್ದರು. ಇನ್ನು ಚೆನ್ನೈ ಮೂಲದ ಗಾಯಕ ಶಾಹುಲ್‌ ಹಮೀದ್‌ 1989ರಲ್ಲಿ ʼದೀನ್‌ ಇಸೈ ಮಾಲೈʼ ತಮಿಳು ಚಿತ್ರದ ಮೂಲಕ ಸಿನಿ ರಂಗ ಪ್ರವೇಶಿಸಿದ್ದರು. ರೆಹಮಾನ್‌ ಸಂಗೀತ ನಿರ್ದೇಶನದಲ್ಲಿ ಹಲವು ಗೀತೆಗಳಿಗೆ ಧ್ವನಿಯಾಗಿದ್ದರು. 1997ರಲ್ಲಿ ಚೆನ್ನೈ ಬಳಿ ನಡೆದ ಕಾರು ಅಪಘಾತದಲ್ಲಿ ಶಾಹುಲ್‌ ಹಮೀದ್‌ ನಿಧರಾಗುವ ವೇಳೆ ಅವರಿಗೆ 44 ವರ್ಷ ವಯಸ್ಸಾಗಿತ್ತು.

ನೆಟ್ಟಿಗರು ಏನಂದ್ರು?

ರೆಹಮಾನ್‌ ಅವರ ಪೋಸ್ಟ್‌ಗೆ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಲವರು ಮೆಚ್ಚುಗೆ ಸೂಚಿಸಿದ್ದರೆ ಇನ್ನು ಕೆಲವರು ಟೀಕಿಸಿದ್ದಾರೆ. ʼʼಈ ವಿಚಾರದಲ್ಲಿ ಹಲವರು ವಿರೋಧ ವ್ಯಕ್ತಪಡಿಸಬಹುದು. ಆದರೆ ಇಂತಹದ್ದೊಂದು ಸಾಹಸ ಮೆರೆದ ರೆಹಮಾನ್‌ ಅವರನ್ನು ಅಭಿನಂದಿಸುತ್ತೇನೆ. ನಮ್ಮೊಂದಿಗಿಲ್ಲದ ಗಾಯಕರ ಧ್ವನಿಯನ್ನು ಕೇಳುವ ಅವಕಾಶವನ್ನು ಅವರು ಒದಗಿಸಿದ್ದಾರೆ. ಇದು ಆ ಗಾಯಕರ ಕುಟುಂಬಕ್ಕೆ ದೊರೆತ ಉತ್ತಮ ಉಡುಗೊರೆ ಎನ್ನುವುದರಲ್ಲಿ ಸಂದೇಹವಿಲ್ಲ. ತಂತ್ರಜ್ಞಾನಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ಸ್ವರ್ಣಲತಾ ಮತ್ತು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಧ್ವನಿಯನ್ನು ಇದೇ ರೀತಿ ಕೇಳಲು ಇಷ್ಟಪಡುತ್ತೇನೆʼʼ ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು ಕಮೆಂಟ್‌ ಮಾಡಿ, “ಇಂತಹ ಪ್ರಯತ್ನ ಇತರ ಗಾಯಕರ ಅವಕಾಶವನ್ನು ಕಸಿಯುವ ಸಾಧ್ಯತೆ ಇದೆ. ಇದು ಎಐಯನ್ನು ವ್ಯಾಪಕವಾಗಿ ಬಳಸುವ ಸಾಧ್ಯತೆಗೆ ದಾರಿ ಮಾಡಿಕೊಡುತ್ತದೆʼʼ ಎಂದು ವಿರೋಧಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರದ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: Actor Rajinikanth: ʻಸಂಘಿʼ ಎನ್ನುವ ಶಬ್ದ ಕೆಟ್ಟದ್ದು ಎಂದು ನನ್ನ ಮಗಳು ಹೇಳಿಲ್ಲ ; ರಜನಿಕಾಂತ್!

ರಜನಿಕಾಂತ್‌ ಅಭಿನಯದ ʼಲಾಲ್‌ ಸಲಾಂʼ ಚಿತ್ರವನ್ನು ಐಶ್ವರ್ಯಾ ರಜನಿಕಾಂತ್‌ ನಿರ್ದೇಶಿಸಿದ್ದಾರೆ. ವಿಷ್ಣು ವಿಶಾಲ್‌, ವಿಕ್ರಾಂತ್‌, ವಿಘ್ನೇಶ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಫೆಬ್ರವರಿ 9ರಂದು ತೆರೆಗೆ ಬರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version