Site icon Vistara News

Actor Rajinikanth: ಪ್ರವಾಹದಿಂದಾಗಿ ರಜನಿಕಾಂತ್‌ಗೂ ಎಂತಹ ಪರಿಸ್ಥಿತಿ ಬಂತು ನೋಡಿ!

rajanikanth

rajanikanth

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಮಿಚಾಂಗ್‌ ಚಂಡಮಾರುತದ (Cyclone Michaung) ಪರಿಣಾಮ ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚೆನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಈ ಮಧ್ಯೆ ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಮನೆಯನ್ನೂ ಪ್ರವಾಹ ಬಿಟ್ಟಿಲ್ಲ. ಚೆನ್ನೈಯ ಅತ್ಯಂತ ಶ್ರೀಮಂತ ಪ್ರದೇಶದಲ್ಲಿ ತಲೈವಾ ಮನೆ ಇದ್ದು, ಅಭಿಮಾನಿಯೊಬ್ಬರು ಚಿತ್ರೀಕರಿಸಿದ ವಿಡಿಯೊದಲ್ಲಿ ಅವರ ಮನೆಯ ಮುಂದೆ ನೀರು ನಿಂತ ರಸ್ತೆ ಕಂಡು ಬರುತ್ತಿದೆ. ಕಾಂಪೌಂಡ್‌ ಒಳಗೂ ನೀರು ನುಗ್ಗಿದೆ. ಮಳೆಯ ಬಳಿಕ ಇಡೀ ರಸ್ತೆ ನೀರಿನಲ್ಲಿ ಮುಳುಗಿರುವುದು ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ (Viral Video) ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಜನಿಕಾಂತ್‌ ಮನೆಯೊಳಗೂ ನೀರು ನುಗ್ಗಿರುವ ಸಾಧ್ಯತೆ ಇದೆ.

ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಪರಿಸ್ಥಿತಿಯ ಬಗ್ಗೆ ಆಘಾತ ಸೂಚಿಸಿದ್ದಾರೆ. ಒಬ್ಬರಂತೂ ‘ತಲೈವರ್‌ಗೂ ಎಂತಹ ಪರಿಸ್ಥಿತಿ ಬಂದಿದೆ’ ಎಂದು ಖೇದ ವ್ಯಕ್ತಪಡಿಸಿದ್ದಾರೆ. ವರದಿ ಪ್ರಕಾರ ರಜನಿಕಾಂತ್‌ ಸದ್ಯ ಚಿತ್ರೀಕರಣದ ನಿಮಿತ್ತ ತಿರುನೆಲ್ವೇಲಿಗೆ ತೆರಳಿದ್ದಾರೆ. ಟಿ.ಜೆ.ಜ್ಞಾನವೇಲ್ ನಿರ್ದೇಶನದ ಮುಂಬರುವ ಚಿತ್ರ ‘ತಲೈವರ್ 170’ರ ಚಿತ್ರೀಕರಣಕ್ಕಾಗಿ ರಜನಿಕಾಂತ್ ತಿರುನೆಲ್ವೇಲಿಗೆ ಹೋಗಿದ್ದಾರೆ. ಅವರ ಕುಟುಂಬವು ನೆರೆ ಬಾಧಿತ ಪೋಯೆಸ್ ಗಾರ್ಡನ್ ಮನೆಯಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ರಜನಿಕಾಂತ್‌ ಈ ಸಮಸ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಮೀರ್‌ ಖಾನ್‌ ರಕ್ಷಣೆ

ಚೆನ್ನೈ ನೆರೆಗೆ ಸಿಲುಕಿದ್ದ ಬಾಲಿವುಡ್‌ ನಟ ಆಮೀರ್‌ ಖಾನ್‌ ಅವರನ್ನು ಮಂಗಳವಾರ ರಕ್ಷಿಸಲಾಗಿತ್ತು. ಪ್ರವಾಹ ಪೀಡಿತ ಸ್ಥಳದಿಂದ ಆಮೀರ್ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ ರಕ್ಷಣಾ ದೋಣಿಯಲ್ಲಿ ಕುಳಿತಿರುವ ಫೋಟೊ ವೈರಲ್ ಆಗಿತ್ತು. ಅಲ್ಲದೆ ಕಲಾವಿದರಾದ ನಮಿತಾ, ವಿನೋದಿನಿ ವೈದ್ಯನಾಥನ್, ಅದಿತಿ ಬಾಲನ್, ಶಂತನು ಮತ್ತು ಆತ್ಮಿಕಾ ಪ್ರವಾಹದಿಂದ ಸಂಕಷ್ಟ ಅನುಭವಿಸಿದ್ದರು. ಅವರನ್ನು ರಕ್ಷಣಾ ಪಡೆ ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಹೋಗಿದೆ. ಮಳೆ ನಿಂತಿದ್ದರೂ ಕಟ್ಟಿ ನಿಂತ ನೀರಿನ ಮಟ್ಟ ಇನ್ನೂ ಇಳಿಕೆಯಾಗಿಲ್ಲ. ವಿದ್ಯುತ್‌ ಸಂಪರ್ಕ ಪುನಃ ಸ್ಥಾಪಿಸಲು ಸರ್ಕಾರ ಅವಿರತ ಪ್ರಯತ್ನದಲ್ಲಿ ತೊಡಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಜನಿಕಾಂತ್‌ ಸದ್ಯ ʼತಲೈವರ್ 170ʼ ಚಿತ್ರದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್ ಮತ್ತು ರಾಣಾ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.‌ ಬಳಿಕ ರಜನಿಕಾಂತ್ ಲೋಕೇಶ್ ಕನಗರಾಜ್ ಅವರೊಂದಿಗೆ ಇನ್ನೂ ಹೆಸರಿಡದ ಚಿತ್ರಕ್ಕಾಗಿ ಕೈ ಜೋಡಿಸಲಿದ್ದಾರೆ. 2024ರ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ. ರಜನಿಕಾಂತ್‌ ಅಭಿನಯದ ʼಜೈಲರ್‌ʼ ಸಿನಿಮಾ ಇತ್ತೀಚೆಗೆ ತೆರೆಕಂಡು ಸೂಪರ್‌ ಹಿಟ್‌ ಆಗಿತ್ತು. ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವ ರಾಜ್‌ಕುಮಾರ್‌, ಮಲೆಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌, ತಮನ್ನಾ, ರಮ್ಯಾ ಕೃಷ್ಣ, ವಿನಾಯಕ್‌ ಮತ್ತಿತರರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಂಡಿತ್ತು.

ಇದನ್ನೂ ಓದಿ: Aamir Khan: ಚೆನ್ನೈ ಪ್ರವಾಹ ಪೀಡಿತ ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ ಗ್ರೇಟ್‌ ಎಸ್ಕೇಪ್‌

Exit mobile version