Site icon Vistara News

Actor Rajinikanth: ರಾಜಕೀಯಕ್ಕೆ ಧುಮುಕಿದ ನಟ ದಳಪತಿ ವಿಜಯ್‌; ರಜನಿಕಾಂತ್‌ ರಿಯಾಕ್ಷನ್‌ ಏನು?

rajnikanth vijay

rajnikanth vijay

ಚೆನ್ನೈ: ಸಿನಿರಂಗ ಮತ್ತು ರಾಜಕೀಯಕ್ಕೆ ಬಿಡಿಸಲಾರದ ನಂಟು. ಸಿನಿ ಕಲಾವಿದರು ರಾಜಕೀಯಕ್ಕೆ ಬರುವುದು ಸಾಮಾನ್ಯ ಎಂಬಂತಾಗಿದೆ. ಬಹಳ ಹಿಂದಿನಿಂದಲೂ ಇದು ರೂಢಿಯಲ್ಲಿದೆ. ಇದೀಗ ಹೊಸದಾಗಿ ಕಾಲಿವುಡ್‌ ನಟ, ದಳಪತಿ ವಿಜಯ್‌ (Vijay) ಸಕ್ರಿಯ ರಾಜಕೀಯಕ್ಕೆ ಧುಮಿಕಿದ್ದಾರೆ. ಫೆಬ್ರವರಿ 2ರಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಅದಕ್ಕೆ ʼತಮಿಳ ವೆಟ್ರಿ ಕಳಗಂʼ (Tamizha Vetri Kazhagam) ಎಂಬ ಹೆಸರನ್ನಿಟ್ಟಿದ್ದಾರೆ. ಇದೀಗ ಈ ಕುರಿತು ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ (Actor Rajinikanth) ಪ್ರತಿಕ್ರಿಯಿಸಿದ್ದಾರೆ.

ತಲೈವಾ ಹೇಳಿದ್ದೇನು?

ವಿಜಯ್‌ ಅವರು ರಾಜಕೀಯ ರಂಗಕ್ಕೆ ಪ್ರವೇಶಿಸಿರುವುದಕ್ಕೆ ರಜನಿಕಾಂತ್‌ ಅಭಿನಂದನೆ ಸಲ್ಲಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮಂಗಳವಾರ ರಜನಿಕಾಂತ್‌ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆ ವೇಳೆ ಹಲವರು ವಿಜಯ್‌ ಅವರ ರಾಜಕೀಯ ಪ್ರವೇಶದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ರಜನಿಕಾಂತ್‌ ಅಭಿನಂದನೆ ತಿಳಿಸಿದರು. ವಿಜಯ್‌ ಅವರ ರಾಜಕೀಯ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.

ಕಣಕ್ಕಿಳಿಯಲಿದ್ದಾರಾ ವಿಜಯ್‌?

ಒಂದು ಮೂಲದ ಪ್ರಕಾರ ತಮಿಳುನಾಡಿನಲ್ಲಿ 2026ರ ರಾಜ್ಯ ಚುನಾವಣೆಯಲ್ಲಿ ವಿಜಯ್‌ ಅವರು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಇದುವರೆಗೆ 68 ಚಿತ್ರಗಳಲ್ಲಿ ನಟಿಸಿರುವ ವಿಜಯ್ ಒಂದು ದಶಕದಿಂದ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಉಚಿತ ಆಹಾರ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿ ವೇತನಗಳು, ಗ್ರಂಥಾಲಯಗಳು, ಸಂಜೆಯ ತರಗತಿಗಳು, ಕಾನೂನು ಸಹಾಯ ಸೇರಿದಂತೆ ಹಲವಾರು ಚಾರಿಟಿ ಮತ್ತು ಕಲ್ಯಾಣ ಉಪಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಅವರು ಪಬ್ಲಿಕ್ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ಷೇತ್ರವಾರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ “ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರಂತಹ ನಾಯಕರ ಬಗ್ಗೆ ಓದಿ, ಒಳ್ಳೆಯದನ್ನು ತೆಗೆದುಕೊಳ್ಳಿ ಮತ್ತು ಉಳಿದವನ್ನು ಬಿಡಿ” ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ: Actor Rajinikanth: ರಜನಿಕಾಂತ್‌ ‘ಸಂಘಿ’ ಹೌದು ಎಂದು ವ್ಯಂಗ್ಯವಾಡಿದ ನಟ ಚೇತನ್‌

ಸದ್ಯ ವಿಜಯ್‌ ಜನಪ್ರಿಯ ನಿರ್ದೇಶಕ ವೆಂಕಟ್ ಪ್ರಭು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (The Greatest of All Time) ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ವೆಟ್ರಿ ಮಾರನ್‌ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದು ವಿಜಯ್‌ ಅವರ ಕೊನೆಯ ಸಿನಿಮಾ ಆಗಲಿದೆ. ಬಳಿಕ ಅವರು ಸಕ್ರಿಯ ರಾಜಕಾರಣಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ʼಲಾಲ್‌ ಸಲಾಮ್‌ʼ ಟ್ರೈಲರ್‌ ಬಿಡುಗಡೆ

ರಜನಿಕಾಂತ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಮಿಳು ಚಿತ್ರ ʼಲಾಲ್‌ ಸಲಾಮ್‌ʼ ಫೆಬ್ರವರಿ 9ರಂದು ತೆರೆಗೆ ಬರಲಿದೆ. ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ʻಲಾಲ್ ಸಲಾಮ್‌ʼ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಟ್ರೈಲರ್‌ ರಿಲೀಸ್‌ ಆಗಿದ್ದು, ಗಮನ ಸೆಳೆಯುತ್ತಿದೆ. ʼಲಾಲ್ ಸಲಾಮ್ʼ ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಸ್ನೇಹ ಮತ್ತು ಕ್ರಿಕೆಟ್ ಸುತ್ತ ಸುತ್ತುವ ಈ ಚಿತ್ರದಲ್ಲಿ ರಜನಿಕಾಂತ್ ʻಮೊಯ್ದೀನ್ ಭಾಯ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version