Site icon Vistara News

Actor Siddharth: ಕನ್ನಡದಲ್ಲೂ ಬಿಡುಗಡೆಯಾಗಲಿದೆ ಸಿದ್ಧಾರ್ಥ್ ಅಭಿನಯದ ‘ಚಿಕ್ಕುʼ!

Actor Siddharth

ಬೆಂಗಳೂರು: ಏತಕಿ ಎಂಟರ್ಟೈನ್ಮೆಂಟ್‌ನಡಿ ನಿರ್ಮಾಣಗೊಂಡಿರುವ ‘ಚಿಕ್ಕು’ ಚಿತ್ರದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಆರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದೆ. ಚಿತ್ರವನ್ನು ಸೆ. 28ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ‘ಚಿಕ್ಕು’ ಚಿತ್ರದಲ್ಲಿ ಸಿದ್ಧಾರ್ಥ್ (Actor Siddharth) ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಷ್ಟೇ ಅಲ್ಲ, ಇದೊಂದು ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ‘ಅಭಿನಯ ಚಕ್ರವರ್ತಿ’ ಸುದೀಪ್‍ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ‘ಚಿಕ್ಕು’ ಚಿತ್ರವು ಕನ್ನಡದ ಮಟ್ಟಿಗೆ ವಿನೂತನವಾಗಿದ್ದು, ಒಂದು ವಿಭಿನ್ನ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದ್ದು, ಚರ್ಚೆಗೆ ಗ್ರಾಸವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಹಿಂದೆ ತಮಿಳಿನಲ್ಲಿ ‘ಪನ್ನೈಯಾರುಂ ಪದ್ಮಿನಿಯುಂ’ ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್‍.ಯು. ಅರುಣ್‍ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

‘ಚಿಕ್ಕು’ ಚಿತ್ರವು ಒಬ್ಬ ಚಿಕ್ಕಪ್ಪ ಮತ್ತು ಅವನ ಸೋದರ ಸೊಸೆಯ ಕುರಿತಾದ ಚಿತ್ರವಾಗಿದ್ದು, ಇಂಥದ್ದೊಂದು ಅಪರೂಪದ ಸಂಬಂಧದ ಕುರಿತಾಗಿ ಇದೇ ಮೊದಲ ಬಾರಿಗೆ ಚಿತ್ರವೊಂದು ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ ಪ್ರಿವ್ಯೂ ನೋಡಿದವರೆಲ್ಲರೂ, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದು, ‘ಚಿಕ್ಕು’ ತಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kamal Haasan: ಇಂಡಿಯನ್‌ 2 ಸಿನಿಮಾದಲ್ಲಿ ಸಿದ್ಧಾರ್ಥ್; ಕಮಲ್‌ ಜತೆ ಯಾವ ಪಾತ್ರದಲ್ಲಿ ಇವರ ಕಮಾಲ್‌?

ಸಿದ್ಧಾರ್ಥ್, ನಿಮಿಷಾ ಸಜಯನ್‍ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದಿಬು ನಿನಾನ್‍ ಥಾಮಸ್‍ ಸಂಗೀತ ನಿರ್ದೇಶನ ಮಾಡಿದ್ದು, ಬಾಲಾಜಿ ಸುಬ್ರಹ್ಮಣ್ಯಂ ಅವರ ಛಾಯಾಗ್ರಹಣವಿದೆ.

ಕಮಲ್‌ ಹಾಸನ್‌ ʻಇಂಡಿಯನ್‌ 2ʼ ಸಿನಿಮಾದಲ್ಲಿ ಸಿದ್ಧಾರ್ಥ್

ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಅವರಿಗೆ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

Exit mobile version