Site icon Vistara News

Actor Yash: ಮತ್ತೊಂದು ಚಿತ್ರದಲ್ಲಿ ಕೇಳಿ ಬಂತು ಯಶ್‌ ಹೆಸರು; ಈ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಾರಾ ರಾಕಿಂಗ್‌ ಸ್ಟಾರ್‌?

yash

yash

ಮುಂಬೈ: ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ (Actor Yash)  ದೇಶದ ಗಮನ ಸೆಳೆದಿದ್ದು, ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಅವರು ಬಹು ನಿರೀಕ್ಷಿತ ಟಾಕ್ಸಿಕ್‌ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಬಾಲಿವುಡ್‌ನ ʼರಾಮಾಯಣʼ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ನಿತೇಶ್‌ ತಿವಾರಿ ನಿರ್ದೇಶನದ ಈ ಸಿನಿಮಾದ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ. ಈ ಮಧ್ಯೆ ಯಶ್‌ ಇನ್ನೊಂದು ಪೌರಾಣಿಕ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ʼಜೈ ಹನುಮಾನ್‌ʼ ಟಾಲಿವುಡ್‌ ಚಿತ್ರದಲ್ಲಿ ಯಶ್‌ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಏನಿದು ಹೊಸ ಅಪ್‌ಡೇಟ್‌?

ಟಾಲಿವುಡ್‌ ನಿರ್ದೇಶಕ ಪ್ರಶಾಂತ್‌ ವರ್ಮಾ ಆ್ಯಕ್ಷನ್‌ ಕಟ್‌ ಹೇಳಿರುವ ಪ್ಯಾನ್‌ ಇಂಡಿಯಾ ಚಿತ್ರ ʻಹನುಮಾನ್‌ʼ ಈ ವರ್ಷಾರಂಭದಲ್ಲಿ ಬಿಡುಗಡೆಯಾಗಿತ್ತು. ತೇಜ ಸಜ್ಜಾ ಅಭಿನಯದ ಈ ಸಿನಿಮಾ ಬಹು ಕೋಟಿ ವೆಚ್ಚದ, ಸೂಪರ್‌ ಸ್ಟಾರ್‌ ಚಿತ್ರಗಳಿಗೆ ಸೆಡ್ಡು ಹೊಡೆದು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. ಅಂದಾಜು 25-30 ಕೋಟಿ ರೂ. ವೆಚ್ಚದ ಈ ಚಿತ್ರ ಈಗಾಗಲೇ 250 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಇದೀಗ ಈ ಸಿನಿಮಾದ ಸೀಕ್ವೆಲ್‌ ಬಗ್ಗೆ ಚರ್ಚೆ ನಡೆಯುತ್ತಿದೆ. ಅದುವೆ ‘ಜೈ ಹನುಮಾನ್’ ಸಿನಿಮಾ. ಇದರಲ್ಲಿ ಮುಖ್ಯ ಪಾತ್ರವಾದ ಹನುಮಂತನಾಗಿ ಯಶ್‌ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ವರದಿಯೊಂದರ ಪ್ರಕಾರ ಹನುಮಂತನ ಪಾತ್ರಕ್ಕೆ ಚಿತ್ರ ತಯಾರಕರ ಮೊದಲ ಆಯ್ಕೆ ಯಶ್‌ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ʼʼಹನುಮಂತನ ಪಾತ್ರದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ʼಹನುಮಾನ್‌ʼ ಚಿತ್ರದಲ್ಲಿ ತೇಜ ಸಜ್ಜಾ ಭಕ್ತ ಹನುಮಂತನ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ʼಜೈ ಹನುಮಾನ್‌ʼ ಚಿತ್ರದಲ್ಲಿಯೂ ಅವರೇ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಸೀಕ್ವೆಲ್‌ನಲ್ಲಿ ಹನುಮಂತನ ಪಾತ್ರಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಹೀಗಾಗಿ ಈ ಪಾತ್ರಕ್ಕಾಗಿ ಯಶ್‌ ಅವರನ್ನು ಪರಿಗಣಿಸಲಾಗಿದ್ದು, ತೇಜ ಸಜ್ಜಾ ಹನುಮಂತನ ಭಕ್ತನಾಗಿ ಮುಂದುವರಿಯಲಿದ್ದಾರೆʼʼ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅಧಿಕೃತ ಘೋಷಣೆ ಬಳಿಕವಷ್ಟೇ ಅಂತೆ-ಕಂತೆಗಳಿಗೆ ತೆರೆ ಬೀಳಲಿದೆ.

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ನಿತೇಶ್‌ ತಿವಾರಿ ಅವರ ಬಹು ನಿರೀಕ್ಷಿತ ಸಿನಿಮಾ ʼರಾಮಾಯಣʼದಲ್ಲಿ ಯಶ್‌ ರಾವಣ ಪಾತ್ರದಲ್ಲಿ ನಟಿಸುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಇದರಲ್ಲಿ ರಾಮನಾಗಿ ರಣಬೀರ್‌ ಕಪೂರ್‌ ಮತ್ತು ಸೀತೆಯಾಗಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡವಾಗಲೀ, ಯಶ್‌ ಕಡೆಯಿಂದಾಗಲೀ ಸ್ಪಷ್ಟನೆ ದೊರೆತಿಲ್ಲವಾದರೂ ಇದು ಬಹುತೇಕ ನಿಜ ಎನ್ನಲಾಗುತ್ತಿದೆ. 

ಇದನ್ನೂ ಓದಿ: Jai Hanuman: ʻಜೈ ಹನುಮಾನ್‌ʼ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್‌ ಬಾಬು, ಹನುಮಾನ್‌ನಾಗಿ ಚಿರಂಜೀವಿ?

ʼದಂಗಲ್‌ʼ, ʼಚಿಚೋರೆʼಯಂತಹ ಸೂಪರ್‌ ಹಿಟ್‌ ಬಾಲಿವುಡ್‌ ಚಿತ್ರಗಳನ್ನು ನಿರ್ದೇಶಿಸಿರುವ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼರಾಮಾಯಣʼದಲ್ಲಿ ರಾವಣನಾಗಿ ನಟಿಸಲು ಯಶ್‌ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ರಾವಣ ಪಾತ್ರಕ್ಕಾಗಿ ಯಶ್‌ 100ರಿಂದ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. 100 ಕೋಟಿ ರೂ. ಸಂಭಾವನೆ ಪಡೆಯುವುದು ಪಕ್ಕಾ. ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ದಿನಗಳು, ಪಾತ್ರ ನೋಡಿಕೊಂಡು ಸಂಭಾವನೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಯಶ್‌ ಸದ್ಯ ಅಧಿಕೃತವಾಗಿ ತೊಡಗಿಸಿಕೊಂಡಿರುವ ಬಹು ನಿರೀಕ್ಷಿತ ಚಿತ್ರ ʼಟಾಕ್ಸಿಕ್‌ʼ 2025ರ ಏಪ್ರಿಲ್‌ 10ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version