Site icon Vistara News

Actor Yash: ರಾವಣನ ಬಳಿಕ ಹನುಮಂತ ಪಾತ್ರದಲ್ಲಿ ಯಶ್‌ ? ರಾಕಿಂಗ್‌ ಸ್ಟಾರ್‌ ಆಪ್ತ ಮೂಲಗಳು ಹೇಳಿದ್ದೇನು?

yash

yash

ಬೆಂಗಳೂರು: ʼಕೆಜಿಎಫ್‌ʼ (KGF) ಸರಣಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬದಲಾಗಿದ್ದಾರೆ. ಸದ್ಯ ಅವರು ಬಹು ನಿರೀಕ್ಷಿತ ʼಟಾಕ್ಸಿಕ್‌ʼ (Toxic) ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಲಯಾಳಂ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ. ಈ ಮಧ್ಯೆ ಯಶ್‌ ಹೆಸರು ವಿವಿಧ ಚಿತ್ರಗಳಲ್ಲಿ ಕೇಳಿ ಬರುತ್ತಿದೆ. ಬಾಲಿವುಡ್‌ನ ‘ರಾಮಾಯಣ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ʼಜೈ ಹನುಮಾನ್‌ʼ ಟಾಲಿವುಡ್‌ ಚಿತ್ರದ ಪ್ರಮುಖ ಪಾತ್ರವನ್ನೂ ಯಶ್‌ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಇದೀಗ ಸ್ಪಷ್ಟನೆ ನೀಡಿದ ಯಶ್‌ ಅವರ ಆಪ್ತ ಮೂಲಗಳು ಇದನ್ನು ನಿರಾಕರಿಸಿವೆ.

ಸ್ಪಷ್ಟನೆಯಲ್ಲೇನಿದೆ?

ಟಾಲಿವುಡ್‌ ನಿರ್ದೇಶಕ ಪ್ರಶಾಂತ್‌ ವರ್ಮಾ ಆ್ಯಕ್ಷನ್‌ ಕಟ್‌ ಹೇಳಿರುವ ಪ್ಯಾನ್‌ ಇಂಡಿಯಾ ಚಿತ್ರ ʻಹನುಮಾನ್‌ʼ ಈ ವರ್ಷಾರಂಭದಲ್ಲಿ ಬಿಡುಗಡೆಯಾಗಿತ್ತು. ತೇಜ ಸಜ್ಜಾ ಅಭಿನಯದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. ಆ ಮೂಲಕ ಬಹು ಕೋಟಿ ವೆಚ್ಚದ, ಸೂಪರ್‌ ಸ್ಟಾರ್‌ ಚಿತ್ರಗಳಿಗೆ ಸೆಡ್ಡು ಹೊಡೆದಿತ್ತು. ಅಂದಾಜು 25-30 ಕೋಟಿ ರೂ. ವೆಚ್ಚದ ಈ ಚಿತ್ರ ಈಗಾಗಲೇ 300 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಜತೆಗೆ ವಿಮರ್ಶಕರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೀಗಾಗಿ ʻಹನುಮಾನ್‌ʼ ಸಿನಿಮಾದ ಎರಡನೇ ಭಾಗವಾಗಿ ʼಜೈ ಹನುಮಾನ್‌ʼ ತಯಾರಾಗಲಿದೆ.

ಬಹುಕೋಟಿ ರೂ. ಬಜೆಟ್‌ನಲ್ಲಿ ʼಜೈ ಹನುಮಾನ್‌ʼ ನಿರ್ಮಿಸಲಾಗುತ್ತಿದೆ. ಈ ಸಿನಿಮಾದಲ್ಲಿ ಯಶ್‌ ಬಹು ಮುಖ್ಯ ಪಾತ್ರ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ʼʼಹನುಮಾನ್‌ʼ ಚಿತ್ರದಲ್ಲಿ ತೇಜ ಸಜ್ಜಾ ಭಕ್ತ ಹನುಮಂತನ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ʼಜೈ ಹನುಮಾನ್‌ʼ ಚಿತ್ರದಲ್ಲಿಯೂ ಅವರೇ ಈ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಜತೆಗೆ ಸೀಕ್ವೆಲ್‌ನಲ್ಲಿ ಹನುಮಂತನ ಪಾತ್ರಕ್ಕೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಇದಕ್ಕಾಗಿ ಯಶ್‌ ಅವರನ್ನು ಪರಿಗಣಿಸಲಾಗಿದೆʼʼ ಎಂದು ಕೆಲವು ವರದಿಗಳು ಹೇಳಿದ್ದವು. ಆದರೆ ಇದೀಗ ಈ ಸುದ್ದಿ ಸುಳ್ಳೆಂದು ಸಾಬೀತಾಗಿದೆ.

ʼʼಯಶ್‌ ಬಹು ನಿರೀಕ್ಷಿತ ʼಟಾಕ್ಸಿಕ್‌ʼ ಚಿತ್ರದಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಅವರು ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದಾರೆ. ವರ್ಕೌಟ್‌ ಕೂಡ ನಡೆಸುತ್ತಿದ್ದಾರೆ. ಹೀಗಾಗಿ ಅವರು ಸದ್ಯ ಬೇರೆ ಯಾವುದೇ ಪ್ರಾಜೆಕ್ಟ್‌ ಒಪ್ಪಿಕೊಂಡಿಲ್ಲʼʼ ಎಂದು ಯಶ್‌ ಆಪ್ತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Toxic Movie Update: ಬಾಲಿವುಡ್​ ಖ್ಯಾತ ನಟಿ ʼಟಾಕ್ಸಿಕ್‌ʼ ಚಿತ್ರದಲ್ಲಿ ಯಶ್​​ಗೆ ನಾಯಕಿ?

ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ನಿತೇಶ್‌ ತಿವಾರಿ ಅವರ ಬಹು ನಿರೀಕ್ಷಿತ ಸಿನಿಮಾ ʼರಾಮಾಯಣʼದಲ್ಲಿ ಯಶ್‌ ರಾವಣ ಪಾತ್ರದಲ್ಲಿ ನಟಿಸುವುದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಇದರಲ್ಲಿ ರಾಮನಾಗಿ ರಣಬೀರ್‌ ಕಪೂರ್‌ ಮತ್ತು ಸೀತೆಯಾಗಿ ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡವಾಗಲೀ, ಯಶ್‌ ಕಡೆಯಿಂದಾಗಲೀ ಸ್ಪಷ್ಟನೆ ದೊರೆತಿಲ್ಲವಾದರೂ ಇದು ಬಹುತೇಕ ನಿಜ ಎನ್ನಲಾಗುತ್ತಿದೆ. ಅಲ್ಲಿ ರಾವಣನಾಗಿ ಅಬ್ಬರಿಸಲಿರುವ ಯಶ್‌, ʼಜೈ ಹನುಮಾನ್‌ʼ ಸಿನಿಮಾದಲ್ಲಿ ಹನುಮಂತನಾಗಿ ಮಿಂಚಲಿದ್ದಾರೆ ಎನ್ನಲಾಗಿತ್ತು. ಸದ್ಯ ಈ ಅಂತೆ-ಕಂತೆಗಳಿಗೆ ವಿರಾಮ ಬಿದ್ದಿದೆ. ʼಟಾಕ್ಸಿಕ್‌ʼ 2025ರ ಏಪ್ರಿಲ್‌ 10ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version