Site icon Vistara News

Box Office War: ಬಾಕ್ಸ್‌ ಆಫೀಸ್‌ನಲ್ಲಿ ಸ್ಟಾರ್‌ ವಾರ್‌; ಮಹೇಶ್‌ ಬಾಬು, ಧನುಷ್‌ ಚಿತ್ರಗಳು ಗಳಿಸಿದ್ದೆಷ್ಟು?

box office

box office

ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ಚಿತ್ರಗಳಾದ ತೆಲುಗಿನ ‘ಗುಂಟೂರು ಖಾರಂ’ (Guntur Kaaram), ‘ಹನುಮಾನ್‌’ (HanuMan) ಮತ್ತು ತಮಿಳಿನ ‘ಕ್ಯಾಪ್ಟನ್‌ ಮಿಲ್ಲರ್‌’ (Captain Miller) ಒಂದೇ ದಿನ ತೆರೆ ಕಂಡಿವೆ. ಹೀಗಾಗಿ ದಕ್ಷಿಣ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಪೈಪೋಟಿ ಕಂಡು ಬಂದಿದ್ದು, ಗೆದ್ದವರು ಯಾರು, ಬಿದ್ದವರು ಯಾರು ಎನ್ನುವ ವಿವರ ಇಲ್ಲಿದೆ (Box Office War).

ʼಗುಂಟೂರು ಖಾರಂʼ

ಟಾಲಿವುಡ್‌ ಸೂಪರ್‌ ಸ್ಟಾರ್‌ ಮಹೇಶ್‌ ಬಾಬು ಮತ್ತು ಕನ್ನಡತಿ ಶ್ರೀಲೀಲಾ ಮೊದಲ ಬಾರಿಗೆ ತೆರೆ ಮೇಲೆ ಒಂದಾದ ಚಿತ್ರ ʼಗುಂಟೂರು ಖಾರಂʼ ಜನವರಿ 12ರಂದು ತೆರೆ ಕಂಡಿತ್ತು. ತ್ರಿವಿಕ್ರಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಈ ಚಿತ್ರ ವಿಫಲವಾಗಿದೆ. ಮೊದಲ ದಿನ ಭಾರತದಲ್ಲಿ ಸುಮಾರು 50 ಕೋಟಿ ರೂ. ಕಲೆಕ್ಷನ್‌ ಮಾಡಿದ ʼಗುಂಟೂರು ಖಾರಂʼನ ಎರಡನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಶುಕ್ರವಾರ ʼಗುಂಟೂರು ಖಾರಂʼ ವಿಶ್ವಾದ್ಯಂತ 82.08 ಕೋಟಿ ರೂ. ಗಳಿಸಿತ್ತು. ಶನಿವಾರ ಚಿತ್ರ ಕಲೆಕ್ಟ್‌ ಮಾಡಿದ್ದ ಕೇವಲ 13.55 ಕೋಟಿ ರೂ. ಎರಡು ದಿನಗಳ ಒಟ್ಟಾರೆ ಗಳಿಕೆ ಭಾರತದಲ್ಲಿ 54.85 ಕೋಟಿ ರೂ. ಆಗಿದ್ದರೆ, ಜಾಗತಿಕವಾಗಿ 94 ಕೋಟಿ ರೂ. ತನ್ನದಾಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ʼಹನುಮಾನ್‌ʼ

ತೇಜ ಸಜ್ಜಾ ನಟನೆಯ `ಹನುಮಾನ್’ ಸಿನಿಮಾ (HanuMan) ಕೂಡ ಜ. 12ರಂದೇ ತೆರೆ ಕಂಡಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಚಿತ್ರ ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ʼಗುಂಟೂರು ಖಾರಂʼಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಪ್ಯಾನ್‌ ಒಂಡಿಯಾ ಮಟ್ಟದಲ್ಲಿ ತೆರೆ ಕಂಡ ಈ ಸಿನಿಮಾ ಮೊದಲ ದಿನ ಗಳಿಸಿದ್ದು 8.05 ಕೋಟಿ ರೂ. ಇತ್ತ ಎರಡನೇ ದಿನವಾದ ಶನಿವಾರ ಗಳಿಕೆಯನ್ನು ಹೆಚ್ಚಿಸಿಕೊಂಡು 12.45 ಕೋಟಿ ರೂ. ಕಲೆಕ್ಟ್‌ ಮಾಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು 20.58 ಕೋಟಿ ರೂ. ಗಳಿಸಿದರೆ, ವಿಶ್ವಾದ್ಯಂತ ಸುಮಾರು 23.5 ಕೋಟಿ ರೂ. ಬಾಚಿಕೊಂಡಿದೆ. ಈ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವ ಸೂಚನೆ ನೀಡಿದೆ. ಈ ಸಿನಿಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ವಿನಯ್ ರೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Box Office War: ʼಗುಂಟೂರು ಖಾರಂʼ-ʼಹನುಮಾನ್‌ʼ ಚಿತ್ರಗಳ ಮಧ್ಯೆ ಬಾಕ್ಸ್‌ ಆಫೀಸ್‌ ವಾರ್‌; ಗೆದ್ದು ಬೀಗಿದ್ದು ಯಾರು?

ʼಕ್ಯಾಪ್ಟನ್‌ ಮಿಲ್ಲರ್‌ʼ

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆಯ ಎರಡನೇ ತಮಿಳು ಚಿತ್ರ ʼಕ್ಯಾಪ್ಟನ್‌ ಮಿಲ್ಲರ್‌ʼ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಧನುಷ್‌ ಕಾಣಿಸಿಕೊಂಡಿದ್ದು, ಶಿವರಾಜ್‌ ಕುಮಾರ್‌ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಈ ಚಿತ್ರದ ಎರಡನೇ ದಿನದ ಕಲೆಕ್ಷನ್‌ ಇಳಿಮುಖವಾಗಿದೆ. ತೆರೆಕಂಡ ಮೊದಲ ದಿನ ಅಂದರೆ ಜನವರಿ 12ರಂದು ಸುಮಾರು 8.65 ಕೋಟಿ ರೂ. ಗಳಿಸಿದ್ದ ʼಕ್ಯಾಪ್ಟನ್‌ ಮಿಲ್ಲರ್‌ʼ ಎರಡನೇ ದಿನ ಕಲೆಕ್ಟ್‌ ಮಾಡಿದ್ದು 6.75 ಕೋಟಿ ರೂ. ಒಟ್ಟು ಗಳಿಕೆ ಭಾರತದಲ್ಲಿ 15.45 ಕೋಟಿ ರೂ. ಆಗಿದ್ದರೆ ಜಗತ್ತಿನಾದ್ಯಂತ 23.5 ಕೋಟಿ ರೂ. ಸಂಗ್ರಹಿಸಿದೆ ಎಂದು ವರದಿಯೊಂದು ತಿಳಿಸಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಸಾಲು ರಜೆ ಇದ್ದು, ಮೂರೂ ಚಿತ್ರಗಳು ಚೇತರಿಕೆ ಕಾಣುವ ನಿರೀಕ್ಷೆಯಲ್ಲಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version