Site icon Vistara News

Fahadh Faasil: ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ ಫಹಾದ್‌ ಫಾಸಿಲ್‌-ವಡಿವೇಲು; ಟೈಟಲ್‌ ರಿವೀಲ್‌

maarisan

maarisan

ಚೆನ್ನೈ: ಮಲಯಾಳಂ ಮೂಲದ ನಟ ಫಹಾದ್‌ ಫಾಸಿಲ್‌ (Fahadh Faasil) ವಿವಿಧ ಭಾಷೆಗಳ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ವೈವಿಧ್ಯಮಯ ಪಾತ್ರಗಳನ್ನು ಆಯ್ದುಕೊಳ್ಳುವ ಅವರ ನಟನಾ ಕೌಶಲ್ಯಕ್ಕೆ ಪ್ರೇಕ್ಷಕರು ಜೈ ಎನ್ನುತ್ತಿದ್ದಾರೆ. ನಾಯಕನಿಂದ ಹಿಡಿದು ಖಳ ನಾಯಕನವರೆಗೆ ಅವರು ಎಲ್ಲ ಪಾತ್ರಗಳಿಗೂ ಜೀವ ತುಂಬುತ್ತಾರೆ. ಸದ್ಯ ಅವರು ಮತ್ತೊಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ʼಮಾಮಣ್ಣಾನ್‌ʼ (Maamannan) ಸಿನಿಮಾ ಬಳಿಕ ಮತ್ತೊಮ್ಮೆ ಫಹಾದ್‌ ಮತ್ತು ಕಾಲಿವುಡ್‌ ಹಿರಿಯ ನಟ ವಡಿವೇಲು (Vadivelu) ತೆರೆ ಹಂಚಿಕೊಳ್ಳುವ ಈ ಚಿತ್ರಕ್ಕೆ ʼಮಾರೀಸನ್‌ʼ (Maareesan) ಎಂದು ಟೈಟಲ್‌ ಇಡಲಾಗಿದೆ.

ನಿರ್ಮಾಪಕ ಆರ್‌.ಬಿ.ಚೌಧರಿ ಅವರ ಸೂಪರ್‌ ಗುಡ್‌ ಫಿಲ್ಮ್ಸ್‌ ಈ ಚಿತ್ರವನ್ನು ನಿರ್ಮಿಸಲಿದೆ. ಕೇರಳ ಮೂಲದ ನಿರ್ದೇಶಕ ಸುಧೀಶ್‌ ಶಂಕರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಯುವನ್‌ ಶಂಕರ್‌ ರಾಜಾ ಸಂಗೀತ ನೀಡಲಿದ್ದಾರೆ. ನಾಯಕಿ ಸೇರಿದಂತೆ ಇನ್ನುಳಿದ ಪಾತ್ರಗಳ ಆಯ್ಕೆ ಆಗಬೇಕಿದೆ.

ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿರುವ ಫಹಾದ್‌-ವಡಿವೇಲು

ಮಾರಿ ಸೆಲ್ವರಾಜ್‌ ನಿರ್ದೇಶನದ ‘ಮಾಮಣ್ಣಾನ್‌’ ಚಿತ್ರದಲ್ಲಿ ಮೊದಲ ಬಾರಿ ವಡಿವೇಲು ಮತ್ತು ಫಹಾದ್‌ ಫಾಸಿಲ್‌ ತೆರೆ ಹಂಚಿಕೊಂಡಿದ್ದರು. ಪಾಲಿಟಿಕಲ್‌ ಡ್ರಾಮಾ ‘ಮಾಮಣ್ಣಾನ್‌’ ಜಾತಿ ವ್ಯವಸ್ಥೆಯ ಸೂಕ್ಷ್ಮ ಸಂಗತಿಯನ್ನು ತೆರೆ ಮೇಲೆ ಬಿಚ್ಚಿಟ್ಟಿತ್ತು. ಕೀರ್ತಿ ಸುರೇಶ್‌, ಉದಯನಿಧಿ ಸ್ಟಾಲಿನ್‌ ಮುಂತಾದವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ತಮ್ಮ ಎಂದಿನ ಹಾಸ್ಯ ಶೈಲಿಯ ಪಾತ್ರದಿಂದ ಹೊರತಾಗಿ ವಡಿವೇಲು ಗಂಭೀರ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಜಾತಿ ವ್ಯವಸ್ಥೆಯ ಕಪಿ ಮುಷ್ಟಿಗೆ ಸಿಲುಕಿ ನಲುಗುವ ರಾಜಕಾರಣಿ ಪಾತ್ರದಲ್ಲಿ ವಡಿವೇಲು ಗಮನ ಸೆಳೆದಿದ್ದರು. ಖಳ ನಾಯಕನಾಗಿ ಫಹಾದ್‌ ಫಾಸಿಲ್‌ ಗಮನಾರ್ಹ ಪ್ರದರ್ಶನ ನೀಡಿದ್ದರು. ಇದೀಗ ಇಬ್ಬರು ಮತ್ತೆ ಒಂದಾಗುತ್ತಿರುವುದು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಇನ್ನು ಫಹಾದ್‌ ಫಾಸಿಲ್‌ ಹಲವು ಬಹು ನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಪ್ಯಾನ್‌ ಇಂಡಿಯಾ ಚಿತ್ರ ‌ʼಪುಷ್ಪ 2: ದಿ ರೂಲ್‌ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಫಹಾದ್‌ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದ ಮೊದಲ ಭಾಗ ಸೂಪರ್‌ ಹಿಟ್‌ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂಡು ಕೊಟ್ಟಿತ್ತು. ಕಥೆಗೆ ಟ್ವಿಸ್ಟ್‌ ಕೊಡುವ ಪಾತ್ರದಲ್ಲಿ ಫಹಾದ್‌ ನಟಿಸಿದ್ದರು. ಎರಡನೇ ಭಾಗದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: Thalaivar 170: ಮುಂಬೈನಲ್ಲಿ ಶೂಟಿಂಗ್‌ ಮುಗಿಸಿದ ರಜನಿಕಾಂತ್‌, ಅಮಿತಾಭ್‌!

ಇದರ ಜತೆಗೆ ಹಲವು ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್‌ ಸ್ಟಾರ್‌ಗಳಾದ ರಜನಿಕಾಂತ್‌- ಅಮಿತಾಭ್‌ ಬಚ್ಚನ್‌ ಅವರ ʼವೆಟ್ಟೈಯನ್‌ʼ ಸಿನಿಮಾದಲ್ಲಿ ಫಹಾದ್‌ ಅಭಿನಯಿಸುತ್ತಿದ್ದಾರೆ. ಇದನ್ನು ಟಿ.ಜೆ.ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್‌, ರಿತಿಕಾ ಸಿಂಗ್‌, ದುಶಾರಾ ವಿಜಯನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಫಾಹದ್‌ ಮಲಯಾಳಂನ ʼಆವೇಶಮ್‌ʼ, ʼಪಾಟ್ಟುʼ, ʼಹನುಮಾನ್‌ ಗೇರ್‌ʼ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version