Site icon Vistara News

Kalki 2898 AD: ʼಕಲ್ಕಿ 2898 ಎಡಿʼ ಚಿತ್ರದಿಂದ ಹೊಸ ಪೋಸ್ಟರ್‌ ಔಟ್; ಗಾಬರಿ ಲುಕ್‌ನಲ್ಲಿ ದೀಪಿಕಾ!

Kalki 2898 AD Deepika Padukone looks poster

ಬೆಂಗಳೂರು: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಜೂನ್‌ 27ರಂದು ತೆರೆಗೆ ಬರಲಿರುವ ಈ ಸಿನಿಮಾ ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ‌, ಕನ್ನಡತಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇದೀಗ ಚಿತ್ರತಂಡ ದೀಪಿಕಾ ಪಡುಕೋಣೆ ಒಳಗೊಂಡಿರುವ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಚಿತ್ರದ ಟ್ರೈಲರ್‌ ನಾಳೆ (ಜೂನ್‌ 10) ಬಿಡುಗಡೆಯಾಗಲಿದೆ.

ಈ ಪೋಸ್ಟರ್ ಅನ್ನು ಸ್ವತಃ ದೀಪಿಕಾ ಅವರೇ ಅನಾವರಣಗೊಳಿಸಿದ್ದಾರೆ. ಪೋಸ್ಟರ್‌ನಲ್ಲಿ ದೀಪಿಕಾ ಅವರು ಅತ್ಯಂತ ಗಾಬರಿಯಾಗಿ ಕಂಡಿದ್ದಾರೆ. ದೀಪಿಕಾ ಲುಕ್‌ಗೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಸಿನಿಮಾ ನೋಡುವ ತವಕ ಹೆಚ್ಚಾಗಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ನಾಳೆ ಟ್ರೈಲರ್‌ ರಿಲೀಸ್‌

ಜೂನ್‌ 10ರಂದು ʼಕಲ್ಕಿ 2898 ಎಡಿʼ ಟ್ರೈಲರ್‌ ರಿಲೀಸ್‌ ಆಗಲಿದೆ. ಈ ಮುಂಚೆ ಹೊಸ ಪೋಸ್ಟರ್‌ ರಿಲೀಸ್‌ ಮಾಡಿ ಚಿತ್ರತಂಡ ಟ್ರೈಲರ್‌ ರಿಲೀಸ್‌ ದಿನಾಂಕವನ್ನು ಘೋಷಿಸಿತ್ತು. ಪೋಸ್ಟರ್‌ನಲ್ಲಿ ಗುಡ್ಡದ ಮೇಲೆ ಪ್ರಭಾಸ್‌ ನಿಂತಿರುವ ಚಿತ್ರ ಕಂಡು ಬಂದಿದ್ದು, ‘ಎಲ್ಲವೂ ಬದಲಾಗುವ ಸಮಯ ಬಂದಿದೆ’ ಎಂದು ಬರೆಯಲಾಗಿತ್ತು. ಭೂತ ಮತ್ತು ಭವಿಷ್ಯತ್‌ ಕಾಲದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವೈಜಯಂತಿ ಮೂವೀಸ್‌ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ: Kalki 2898 AD: ಪ್ರಭಾಸ್‌-ದೀಪಿಕಾ ಜೋಡಿಯ ʼಕಲ್ಕಿʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

ಕುತೂಹಲ ಮೂಡಿಸಿದ ಅಮಿತಾಭ್‌

ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕೆಲವು ದಿನಗಳ ಹಿಂದೆ ಚಿತ್ರತಂಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ರಿವೀಲ್ ಮಾಡಿತ್ತು. ಬಿಗ್ ಬಿ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಟೀಸರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುಹೆಯೊಂದರಲ್ಲಿ ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ ನಾನು ಕಲ್ಕಿಯ ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೇನೆ. ನಾನು ಗುರು ದ್ರೋಣರ ಮಗ ಅಶ್ವತ್ಥಾಮʼʼ ಎಂದು ಅಮಿತಾಭ್‌ ಹೇಳುವ ಮೂಲಕ ಈ ಸಿನಿಮಾದ ಕಥೆ ಪುರಾಣ ಕಾಲದಿಂದ ಭವಿಷ್ಯದತ್ತ ಸಾಗುತ್ತದೆ ಎನ್ನುವ ಸುಳಿವು ಲಭಿಸಿತ್ತು. ಭಾರತ ಚಿತ್ರರಂಗದ ಮಟ್ಟಿಗೆ ಇಂತಹ ಪ್ರಯೋಗ ಬಹಳ ಅಪರೂಪ.

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಅಶ್ವಿನ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ, ಕಮಲ್‌ ಹಾಸನ್‌ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ‌ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆಯೇ ಧ್ವನಿ ನೀಡಲಿದ್ದಾರೆ. ಜತೆಗೆ ಹಿಂದಿಯಲ್ಲಿಯೂ ಅವರು ಡಬ್‌ ಮಾಡಲಿದ್ದಾರೆ.

Exit mobile version