ಬೆಂಗಳೂರು: ʼಆಡು ಜೀವಿತಂʼ (Aadujeevitham Movie) ಸದ್ಯ ದೇಶದ ಸಿನಿ ರಸಿಕರ ಗಮನ ಸೆಳೆದ ಮಲಯಾಳಂ ಚಿತ್ರ. ಮಾಲಿವುಡ್ ಸೂಪರ್ ಸ್ಟಾರ್, ʼಸಲಾರ್ʼ ಚಿತ್ರದ ಮೂಲಕ ಮಿಂಚಿದ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅಭಿನಯದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕಾಡೆಮಿ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ (A.R.Rahman) ಈ ಸಿಮಾಕ್ಕೆ ಸಂಗೀತ ನೀಡಿರುವುದು ವಿಶೇಷ.
ಈ ಚಲನಚಿತ್ರವು ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ಅದೃಷ್ಟವನ್ನು ಹುಡುಕುತ್ತಾ ವಿದೇಶಕ್ಕೆ ವಲಸೆ ಹೋದ ಯುವಕ ನಜೀಬ್‌ನ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್, ಟೀಸರ್ ಕುತೂಹಲ ಮೂಡಿಸಿದೆ.
‘ದಿ ಗೋಟ್ಸ್ ಲೈಫ್’ ಎಂದೂ ಕರೆಯಲ್ಪಡುವ ಈ ಚಿತ್ರದ ಅಧಿಕೃತ ವೆಬ್‌ಸೈಟ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಎ.ಆರ್.ರೆಹಮಾನ್, ಇದನ್ನು ಇಂಗ್ಲಿಷ್‌ನ ಹಿಟ್ ಚಿತ್ರ ‘ಲಾರೆನ್ಸ್ ಆಫ್ ಅರೇಬಿಯಾ’ಗೆ ಹೋಲಿಸಿದ್ದಾರೆ. ಅದರಂತೆ ‘ಆಡು ಜೀವಿತಂ’ ಕೂಡ ಪ್ರೇಕ್ಷಕರ ಮೇಲೆ ಆಳವಾದ, ಮರೆಯಾಗದ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದ್ದಾರೆ.
ವಿಷುಯಲ್ ರೊಮ್ಯಾನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ 28ರಂದು ಈ ಚಿತ್ರ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ತೆರೆ ಕಾಣಲಿದೆ.
ನೈಜ ಘಟನೆ
ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಚಿತ್ರೀಕರಿಸಲಾಗಿರುವ ಈ ಚಲನಚಿತ್ರವು ಮಾಲಿವುಡ್‌ನ ಇದುವರೆಗಿನ ಅತಿದೊಡ್ಡ ಸಾಹಸ ಎನ್ನಲಾಗುತ್ತಿದೆ. ಹಣ ಸಂಪಾದಿಸಲು ಸೌದಿ ಅರೇಬಿಯಾಕ್ಕೆ ಹೋದ ಭಾರತೀಯ ವಲಸೆ ಕಾರ್ಮಿಕ ನಜೀಬ್ ಮುಹಮ್ಮದ್‌ನ ನಿಜ ಜೀವನದ ಘಟನೆ ಇದು ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ವಿಧಿಯ ವೈಚಿತ್ರ್ಯದಿಂದಾಗಿ ನಜೀಬ್ ಗುಲಾಮನ ಬದುಕನ್ನು ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅವನು ಮರುಭೂಮಿಯ ಮಧ್ಯದಲ್ಲಿ ಮೇಕೆಗಳನ್ನು ಮೇಯಿಸಬೇಕಾಗುತ್ತದೆ. ಮಲಯಾಳಂನಲ್ಲಿ ಆಡು ಜೀವಿತಂ ಅಂದರೆ ಆಡಿನ ಬದುಕು ಎಂದರ್ಥ.
ಇದನ್ನೂ ಓದಿ: Aadujeevitham Movie : ಆಡು ಜೀವಿತಂ ನಿರೀಕ್ಷೆಗೂ ಮೊದಲೇ ತೆರೆಗೆ; ರಿಲೀಸ್ ಡೇಟ್ ಫಿಕ್ಸ್
ಸದ್ಯ ಪೃಥ್ವಿರಾಜ್ ʼಸಲಾರ್ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ್ ಈ ಸಿನಿಮಾದಲ್ಲಿ ನಾಯಕ ಪ್ರಭಾಸ್ ಜತೆಗೆ ಪೃಥ್ವಿರಾಜ್ ಕೂಡ ಗಮನ ಸೆಳೆದಿದ್ದರು. ನಟನೆಯ ಜತೆಗೆ ನಿರ್ದೇಶನದಲ್ಲಿಯೂ ಛಾಪು ಮೂಡಿಸುತ್ತಿರುವ ಪೃಥ್ವಿರಾಜ್ ಸದ್ಯ ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರ ಮುಂದಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದರ ಜತೆಗೆ ʼವಿಲಯತ್ ಬುದ್ಧʼ, ʼಗುರುವಾಯೂರ್ ಅಂಬಲತ್ತಿಲ್ಲ್ʼ ಎಂಬ ಮಲಯಾಳಂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿಯ ʼಬಡೆ ಮಿಯಾನ್ ಚೋಟೆ ಮಿಯಾನ್ʼ ಈ ವರ್ಷ ತೆರೆಗೆ ಬರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ