ಹೈದರಾಬಾದ್: ಎಸ್.ಎಸ್.ರಾಜಮೌಳಿ (S.S. Rajamouli) ಎನ್ನುವ ಸ್ಟಾರ್ ನಿರ್ದೇಶಕರ ಹೆಸರು ಕೇಳದವರು ವಿರಳ. ನಿರ್ದೇಶನಕ್ಕೆ ಹೊಸ ಆಯಾಮ ತಂದುಕೊಟ್ಟವರು ಅವರು. ಟಾಲಿವುಡ್‌ನ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಯಾವ ಚಿತ್ರವೂ ಇದುವರೆಗೆ ಫ್ಲಾಪ್ ಆಗಿಲ್ಲ ಎನ್ನುವುದು ವಿಶೇಷ. ಹೀಗಾಗಿ ಅವರು ಸಿನಿಮಾ ಮಾಡುತ್ತಾರೆ ಎನ್ನುವಾಗಲೇ ನಿರೀಕ್ಷೆ ಮೂಡುತ್ತದೆ, ಕುತೂಹಲ ಗರಿಗೆದರುತ್ತದೆ. ಸದ್ಯ ಅವರು ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಮುಂದಿನ ಚಿತ್ರ ನಿರ್ದೇಶಿಸಲಿದ್ದಾರೆ. ಸದ್ಯ ಚಿತ್ರಕ್ಕೆ ʼಎಸ್.ಎಸ್.ಬಿ.ಎಂ. 29ʼ (SSMB 29) ಎನ್ನುವ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಮೊದಲ ಬಾರಿಗೆ ಇಬ್ಬರು ಚಿತ್ರಕ್ಕಾಗಿ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಮತ್ತೊಂದು ಮುಖ್ಯ ಕಾರಣ. ಇವರ ಸಂಭಾವನೆ ಕಾರಣಕ್ಕೂ ಚಿತ್ರ ಸೆಟ್ಟೇರುವ ಮೊದಲೇ ಸದ್ದು ಮಾಡುತ್ತಿದೆ.
ದಾಖಲೆ ಸಂಭಾವನೆ
ಈ ನಡುವೆ ʼಎಸ್.ಎಸ್.ಬಿ.ಎಂ. 29ʼ ಸಿನಿಮಾಕ್ಕಾಗಿ ಮಹೇಶ್ ಬಾಬು ದಾಖಲೆಯ ಪ್ರತಿಫಲ ಪಡೆಯುತ್ತಿದ್ದಾರೆ. ಅವರು 60ರಿಂದ 80 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಸಂಭಾವನೆ ಪಡೆಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಅದರ ಬದಲಾಗಿ ಮಹೇಶ್ ಬಾಬು ಚಿತ್ರದ ಲಾಭದಲ್ಲಿ ಶೇರ್ ಪಡೆದುಕೊಳ್ಳುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ʼʼಮಹೇಶ್ ಬಾಬು ಈ ಚಿತ್ರಕ್ಕಾಗಿ ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಚಿತ್ರದ ಲಾಭದಲ್ಲಿ ಶೇರ್ ಪಡೆದುಕೊಳ್ಳಲಿದ್ದಾರೆ. ಇದು ಸಂಭಾವನೆಗಿಂತ ಹೆಚ್ಚು ಲಾಭದಾಯಕವಾಗಲಿದೆʼʼ ಎಂದು ವರದಿಯೊಂದು ತಿಳಿಸಿದೆ. ಆದರೆ ಇಬ್ಬರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯಾಕಾಗಿ ಈ ನಿರ್ಧಾರ?
ರಾಜಮೌಳಿ ಚಿತ್ರ ಖಂಡಿತವಾಗಿಯೂ ಹಿಟ್ ಆಗುತ್ತದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೆ ಮೊದಲ ಬಾರಿ ಮಹೇಶ್ ಬಾಬು ಮತ್ತು ರಾಜಮೌಳಿ ಒಂದಾಗುತ್ತಿರುವುದು ಕೂಡ ಸಾಕಷ್ಟು ಹೈಪ್ ಸೃಷ್ಟಿಸಿದೆ. ಈ ಕಾರಣಕ್ಕಾಗಿ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಎನ್ನಲಾಗುತ್ತಿದೆ.
ʼಎಸ್.ಎಸ್.ಬಿ.ಎಂ. 29ʼ ಸಿನಿಮಾದ ಕಥೆ ರಾಮಾಯಣದ ಹನುಮಂತನ ಪಾತ್ರದಿಂದ ಸ್ಫೂರ್ತಿ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ವಿಜಯೇಂದ್ರ ಪ್ರಸಾದ್ ಚಿತ್ರಕ್ಕಾಗಿ ಕಥೆ ಬರೆಯುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಹಾಲಿವುಡ್ ನಟರನ್ನು ಸಂಪರ್ಕಿಸಲಾಗಿದೆ. ಶೀಘ್ರದಲ್ಲಿಯೇ ಆಫ್ರಿಕಾದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಭರ್ಜರಿ ಸಾಹಸ ದೃಶ್ಯಗಳು ಈ ಚಿತ್ರದಲ್ಲಿ ಇರಲಿದೆ.
ಇದನ್ನೂ ಓದಿ: Guntur Kaaram: 150 ಕೋಟಿ ರೂ. ಗಡಿ ದಾಟಿದ ‘ಗುಂಟೂರು ಖಾರಂ’; ಮಹೇಶ್ ಬಾಬು ಸಿನಿಮಾದ ಗಳಿಸಿದ್ದೆಷ್ಟು?
2022ರಲ್ಲಿ ತೆರೆಕಂಡ ʼಆರ್.ಆರ್.ಆರ್.ʼ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅವರು ಈ ಚಿತ್ರಕ್ಕಾಗಿಯೇ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ. ದಾಖಲೆ ಬರೆದ ʼಬಾಹುಬಲಿʼ, ʼಬಾಹುಬಲಿ 2ʼ, ʼಆರ್.ಆರ್.ಆರ್.ʼ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಅವರೇ ʼಎಸ್.ಎಸ್.ಬಿ.ಎಂ. 29ʼ ಚಿತ್ರದ ಬರವಣಿಗೆಯಲ್ಲಿ ತೊಡಗಿರುವುದು ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣ. ಇತ್ತೀಚೆಗೆ ತೆರೆಕಂಡ ಮಹೇಶ್ ಬಾಬು ಅಭಿನಯದ ʼಗುಂಟೂರು ಖಾರಂʼ ಸಿನಿಮಾ ಸಾಧಾರಣ ಗೆಲುವು ದಾಖಲಿಸಿದೆ. ಹೀಗಾಗಿ ಅವರು ʼಎಸ್.ಎಸ್.ಬಿ.ಎಂ. 29ʼ ಚಿತ್ರದತ್ತ ಗಮನ ಹರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ