ಬೆಂಗಳೂರು: ಫಹಾದ್ ಫಾಸಿಲ್ (Fahadh Faasil) ಅಭಿನಯದ ಬ್ಲಾಕ್‌ಬಸ್ಟರ್ ಮಲಯಾಳಂ ಸಿನಿಮಾ ʻಆವೇಶಂʼ ಒಟಿಟಿಗೆ ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ʻಆವೇಶಂʼ (Aavesham Releases On OTT) ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಥಿಯೇಟರ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ, ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
ʻಆವೇಶಂʼ ಸಿನಿಮಾವು ಭಾರತದಲ್ಲಿ 93.9 ಕೋಟಿ ರೂ. ಗಳಿಕೆ ಮಾಡಿತ್ತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 146.9 ಕೋಟಿ ರೂ. ಗಳಿಕೆ ಕಂಡಿತ್ತು. ಈ ಚಿತ್ರದ ಬಜೆಟ್ 30 ಕೋಟಿ ರೂ. ಆಗಿತ್ತು. ಇದೀಗ ಅಮೆಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಡಬ್ಬಿಂಗ್ ಆವೃತ್ತಿಗಳ ಕುರಿತು ಇನ್ನೂ ಯಾವುದೇ ಅಪಡೇಟ್ ಬಂದಿಲ್ಲ. ಫ್ರಂಟ್ ರೋ ಅವರ ಟ್ವೀಟ್ ಪ್ರಕಾರ, ಆವೇಶಂನ ಡಿಜಿಟಲ್ ಹಕ್ಕುಗಳು 35 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. ಈ ಮೂಲಕ ದುಲ್ಕರ್ ಸಲ್ಮಾನ್ ಅವರ ʻಕಿಂಗ್ ಆಫ್ ಕೋಥಾʼದ ದಾಖಲೆಯನ್ನು ಮುರಿದಿದೆ ಎಂದು ವರದಿಯಾಗಿದೆ. ʻಕಿಂಗ್ ಆಫ್ ಕೋಥಾʼ 32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.
ಜಿತು ಮಾಧವನ್ ನಿರ್ದೇಶನದ ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಮನ್ಸೂರ್ ಅಲಿ ಖಾನ್ ಮತ್ತು ಸಜಿನ್ ಗೋಪು ಕೂಡ ನಟಿಸಿದ್ದಾರೆ. ಮಲಯಾಳಂ ಸಿನಿಮಾದ ಪ್ರಮುಖ ಕಥೆ ಬೆಂಗಳೂರಿನಲ್ಲಿ ನಡೆಯುತ್ತದೆ. ಓದಲೆಂದು ಬೆಂಗಳೂರಿಗೆ ಬರುವ ಮೂವರು ಹುಡುಗರು ಅಲ್ಲಿ ಜಗಳದಲ್ಲಿ ಸಿಕ್ಕಿ ಬಿದ್ದು ಸ್ಥಳೀಯ ದರೋಡೆಕೋರನ ನೆರವಿನಿಂದ ಗೆಲುವು ಪಡೆಯಲು ಪ್ರಯತ್ನಿಸುವಂತಹ ಕಥೆ ಹೊಂದಿದೆ. ಆ ಸ್ಥಳೀಯ ದರೋಡೆಕೋರ ಬೇರಾರು ಅಲ್ಲ, ಫಹಾದ್ ಫಾಸಿಲ್.
ಸಂಪೂರ್ಣ ಬಿಳಿ ಉಡುಗೆಯಲ್ಲಿ, ಚಿನ್ನದ ಸರಗಳೊಂದಿಗೆ, ದಪ್ಪ ಮೀಸೆಯನ್ನು ಹೊಂದಿರುವ ಫಹಾದ್ ಪಾತ್ರ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಫಹಾದ್ ಅವರು ರಂಗಾ ಪಾತ್ರವನ್ನು ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತು ಈ ಮುಂಚೆ ಹೇಳಿಕೊಂಡಿದ್ದರು. ʻʻನಾನು ಈ ಮೊದಲು ಅಂತಹ ಪಾತ್ರಗಳನ್ನು ಮಾಡಿಲ್ಲ. ಆದ್ದರಿಂದ ಈ ಕಥೆ ನನ್ನ ಬಳಿಗೆ ಬಂದಾಗ, ನಾನು ಹೌದು ಎಂದು ಹೇಳಿದೆ. ಈ ಹಿಂದೆ ನಾನು ಮಾಡಿದ್ದ ಪಾತ್ರಗಳಿಗಿಂತ ಭಿನ್ನವಾಗಿ ಇತ್ತು. ಅಲ್ಲದೆ, ನಾನು ಕನ್ನಡ ಮತ್ತು ಮಲಯಾಳಂ ಮಿಶ್ರಿತ ಭಾಷೆ ಮಾತನಾಡಬೇಕು ಎಂದು ಮನೋರಮಾ ಹೇಳಿದ್ದರುʼʼ ಎಂದರು. ಇವು 2024ರಲ್ಲಿ ಅತ್ಯಧಿಕ ಗಳಿಕೆ ಮಾಡಿದ ನಾಲ್ಕನೇ ಮಲಯಾಳ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿತ್ತು.
ಇದನ್ನೂ ಓದಿ: Thug Life Movie: ಕಮಲ್ ಹಾಸನ್ ಸಿನಿಮಾಗೆ ಕಾಲಿವುಡ್ ನಟ ಸಿಂಬು ಎಂಟ್ರಿ!
ಇನ್ನು ಫಹಾದ್ ಫಾಸಿಲ್ ಹಲವು ಬಹು ನಿರೀಕ್ಷಿತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ಚಿತ್ರ ʼಪುಷ್ಪ 2: ದಿ ರೂಲ್ʼ ಸಿನಿಮಾದ ಮುಖ್ಯ ಪಾತ್ರದಲ್ಲಿ ಫಹಾದ್ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಈ ಚಿತ್ರದ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ಅಲ್ಲದೆ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂಡು ಕೊಟ್ಟಿತ್ತು. ಕಥೆಗೆ ಟ್ವಿಸ್ಟ್ ಕೊಡುವ ಪಾತ್ರದಲ್ಲಿ ಫಹಾದ್ ನಟಿಸಿದ್ದರು. ಎರಡನೇ ಭಾಗದಲ್ಲಿನ ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.
ಇದರ ಜತೆಗೆ ಹಲವು ವರ್ಷಗಳ ಬಳಿಕ ತೆರೆ ಮೇಲೆ ಒಂದಾಗುತ್ತಿರುವ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್- ಅಮಿತಾಭ್ ಬಚ್ಚನ್ ಅವರ ʼವೆಟ್ಟೈಯನ್ʼ ಸಿನಿಮಾದಲ್ಲಿ ಫಹಾದ್ ಅಭಿನಯಿಸುತ್ತಿದ್ದಾರೆ. ಇದನ್ನು ಟಿ.ಜೆ.ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರಾ ವಿಜಯನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಫಾಹದ್ ಮಲಯಾಳಂನ ʼಆವೇಶಮ್ʼ, ʼಪಾಟ್ಟುʼ, ʼಹನುಮಾನ್ ಗೇರ್ʼ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.