Site icon Vistara News

The Kerala Story: ದೂರದರ್ಶನದಲ್ಲಿ ʻದಿ ಕೇರಳ ಸ್ಟೋರಿʼ ಪ್ರಸಾರ ಮಾಡದಂತೆ ಕೇರಳ ಸಿಎಂ ಆಗ್ರಹ

The kerala story Doordarshan

ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಏ.4 ಗುರುವಾರ ʻದಿ ಕೇರಳ ಸ್ಟೋರಿ’ (The Kerala Story) ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ಸೂಚಿಸಿದ್ದಾರೆ. ದೂರದರ್ಶನ ವಿವಾದಾತ್ಮಕ ಚಲನಚಿತ್ರ `ದಿ ಕೇರಳ ಸ್ಟೋರಿ’ಯನ್ನು ಪ್ರಸಾರ ಮಾಡುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದು ಕೇರಳ ರಾಜ್ಯದ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಉದ್ದೇಶದಿಂದ ಸಿನಿಮಾ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಒಂದು ವೇಳೆ ಸಿನಿಮಾ ಪ್ರಸಾರ ಕಂಡರೆ ಕೇರಳವನ್ನು ಅವಮಾನಿಸಿದಂತೆ ಎಂದು ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೋಮು ವೈಷಮ್ಯವನ್ನು ಬೆಳೆಸುವ ಇಂತಹ ಪ್ರಯತ್ನಗಳನ್ನು ವಿರೋಧಿಸಲು ಜಾತ್ಯತೀತ ಕೇರಳ ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕ ಮತ್ತು ಕೇರಳದ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಕೂಡ ʻಕೇಂದ್ರ ಸರ್ಕಾರ ಈ ಸಿನಿಮಾ ಪ್ರಸಾರ ಮಾಡುವ ನಿರ್ಧಾರದಿಂದ ಕೈಬಿಡಬೇಕೆಂದುʼ ಒತ್ತಾಯಿಸಿದರು.

ʻಬಿಜೆಪಿಯ ರಾಜಕೀಯ ಲಾಭಕ್ಕಾಗಿ ದೂರದರ್ಶನವನ್ನು ಬಳಸಿಕೊಳ್ಳಬಾರದು. ಈ ಸಿನಿಮಾವನ್ನು ಪ್ರಸಾರ ಮಾಡುವ ಮೂಲಕ ಮೋದಿ ಸರ್ಕಾರ ಕೇರಳದ ಜಾತ್ಯತೀತ ಸಮಾಜದಲ್ಲಿ ಬಿರುಕು ಮೂಡಿಸಲು ಬಯಸುತ್ತಿದೆʼʼ ಎಂದು ವಿ ಡಿ ಸತೀಶನ್ ಹೇಳಿದ್ದಾರೆ.

ಇದನ್ನೂ ಓದಿ: The Kerala Story:‌ ಒಟಿಟಿಗೆ ಬರ್ತಾ ಇದೆ ‘ದಿ ಕೇರಳ ಸ್ಟೋರಿ’ ಸಿನಿಮಾ; ಸ್ಟ್ರೀಮಿಂಗ್ ಯಾವಾಗ?

ಜನರಲ್ಲಿ ದ್ವೇಷ ತುಂಬುವ ‘ಕೇರಳ ಸ್ಟೋರಿ’ ಸಿನಿಮಾ ಪ್ರಸಾರ ಖಂಡನೀಯ. ರಾಷ್ಟ್ರೀಯ ಸುದ್ದಿ ಪ್ರಸಾರಕರು ಬಿಜೆಪಿ-ಆರ್‌ಎಸ್‌ಎಸ್‌ಗಳ ಪ್ರಚಾರ ಯಂತ್ರವಾಗಬಾರದು. ದ್ವೇಷ ಬಿತ್ತುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ಸದಾ ನಿಲ್ಲುತ್ತದೆʼʼಎಂದು ಮುಖ್ಯಮಂತ್ರಿ ಪಿಣರಾಯಿ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯುನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಂಅನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಸಿನಿಮಾ ಬಿಡುಗಡೆಯಾಗಿತ್ತು. ಸುದೀಪ್ತೋ ಸೇನ್ ನಿರ್ದೇಶಿಸಿದ ಮತ್ತು ವಿಪುಲ್ ಶಾ ನಿರ್ಮಿಸಿದ್ದಾರೆ. ಅದಾ ಶರ್ಮಾ ಚಿತ್ರದ ನಾಯಕಿಯಾಗಿ ನಟಿಸಿದ್ದರು.

Exit mobile version