Site icon Vistara News

Ram Mandir: ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ನಟ ನಿಖಿಲ್‌ಗೆ ಆಹ್ವಾನ

Ram Mandir nikhil kumar ayodhye

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ರಾಮ ಮಂದಿರ (Ram Mandir) ಉದ್ಘಾಟನೆಯಾಗಲಿದೆ. ಈ ‘ಪ್ರಾಣ ಪ್ರತಿಷ್ಠಾ’ (Pran Pratistha-ಪ್ರತಿಷ್ಠಾಪನಾ ಸಮಾರಂಭ) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಪ್ರತಿಷ್ಠಾಪನಾ ಸಮಾರಂಭದ ನಂತರ ರಾಮ್ ಲಲ್ಲಾ (Lord Ram Lalla) ವಿಗ್ರಹವನ್ನು ರಾಮ ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಗೆ ನಟ ನಿಖಿಲ್‌ ಕುಮಾರ್ (Nikhil Kumar)​ ಅವರಿಗೆ ಆಹ್ವಾನ ನೀಡಲಾಗಿದೆ. ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಖಿಲ್ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗಿ ಆಗುವಂತೆ ಆಹ್ವಾನ ನೀಡಲಾಗಿದೆ.

ಸ್ಯಾಂಡಲ್‌ವುಡ್‌ನ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ರಾಮಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ. ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಅವರೊಂದಿಗೆ ಚಿರಂಜೀವಿ ಅವರು ಕೂಡ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Ayodhya Ram Mandir: ಗುಜರಾತ್‌ನಿಂದ ಹೊರಟು ಉತ್ತರಪ್ರದೇಶ ತಲುಪಿದ 108 ಅಡಿ ಉದ್ದದ ಅಗರಬತ್ತಿ

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯು ವಿಗ್ರಹವನ್ನು ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ತರುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ವಿಗ್ರಹಕ್ಕೆ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ. ಜತೆಗೆ ಸುಗಂಧ ದ್ರವ್ಯಗಳನ್ನು ಹಚ್ಚುವ ಮೂಲಕ ವಿಗ್ರಹವನ್ನು ಜೀವಂತಗೊಳಿಸಲಾಗುತ್ತದೆ. ಬಳಿಕ ಗರ್ಭಗುಡಿಯಲ್ಲಿ ವಿಗ್ರಹವನ್ನು ಇರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ವಿಗ್ರಹವನ್ನು ಪ್ರಧಾನ ಅರ್ಚಕರು ಅಲಂಕರಿಸಿ ಸರಿಯಾದ ಸ್ಥಳದಲ್ಲಿ ಸ್ಥಾಪಿಸುತ್ತಾರೆ. ನಂತರ ಪುರೋಹಿತರು ಸ್ತೋತ್ರಗಳು ಮತ್ತು ಮಂತ್ರಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಮೊದಲಿಗೆ ವಿಗ್ರಹದ ಕಣ್ಣುಗಳನ್ನು ತೆರೆಯಲಾಗುತ್ತದೆ. ಈ ಪ್ರಕ್ರಿಯೆ ನಂತರ ವಿಗ್ರಹವನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ. ಈ ಎಲ್ಲ ಆಚರಣೆಗಳು ವಿಗ್ರಹಕ್ಕೆ ಜೀವ ತುಂಬುತ್ತವೆ ಎನ್ನುವ ನಂಬಿಕೆ ಇದೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದ ಸುಮಾರು 4 ಸಾವಿರ ಸಂತರು ಪಾಲ್ಗೊಳ್ಳಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಸುಮಾರು 10-15 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ.

Exit mobile version