Site icon Vistara News

Salaar OTT Release: ʼಸಲಾರ್‌ʼ ಒಟಿಟಿ ರಿಲೀಸ್‌ ದಿನಾಂಕ ಫಿಕ್ಸ್‌; ಈ ವಿಶೇಷ ದಿನದಂದು ಪ್ರಸಾರವಾಗಲಿದ್ಯಾ ಪ್ರಭಾಸ್‌ ಚಿತ್ರ?

salaar

salaar

ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿದ್ದ ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌ಗೆ (Prabhas) ʼಸಲಾರ್‌ʼ ಚಿತ್ರದ (Salaar Movie) ರೂಪದಲ್ಲಿ ಬಹುದೊಡ್ಡ ಗೆಲುವು ಲಭಿಸಿದೆ. ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಆ್ಯಕ್ಷನ್‌ ಕಟ್‌ ಹೇಳಿರುವ  ಪ್ಯಾನ್‌ ಇಂಡಿಯಾ ಚಿತ್ರ ಸಲಾರ್‌: ಪಾರ್ಟ್‌ 1-ಸೀಸ್‌ಫೈರ್‌ (Salaar: Part 1 – Ceasefireಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಸದ್ಯ ಇದು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 600 ಕೋಟಿ ರೂ. ಕಲೆಕ್ಷನ್‌ ಮಾಡಿ ಇನ್ನೂ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತದೆ. ಇದೀಗ ಚಿತ್ರದ ಒಟಿಟಿ ರಿಲೀಸ್‌ ದಿನಾಂಕದ ಬಗ್ಗೆ ಸುದ್ದಿ ಹರಿದಾಡುತ್ತಿದೆ (Salaar OTT Release).

ಯಾವಾಗ ಸ್ಟ್ರೀಮಿಂಗ್‌?

ʼಸಲಾರ್‌ʼ ಡಿಸೆಂಬರ್‌ 22ರಂದು ತೆರೆಗೆ ಬಂದಿತ್ತು. ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ, ಮಲೆಯಾಳಂಗಳಲ್ಲಿ ರಿಲೀಸ್‌ ಆಗಿತ್ತು. ಹೀಗಾಗಿ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದಂತೆ ಒಟಿಟಿ ಸ್ಟ್ರೀಮಿಂಗ್‌ ಬಗ್ಗೆ ಮಾತು ಕೇಳಿ ಬರತೊಡಗಿದೆ. ಕೆಲವು ಮೂಲಗಳ ಪ್ರಕಾರ, ಚಿತ್ರದ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಆವೃತ್ತಿ ಗಣರಾಜ್ಯೋತ್ಸವ ದಿನದಿಂದ (ಜನವರಿ 26) ಪ್ರಸಾರವಾಗಲಿದೆ. ಆದರೆ ಹಿಂದಿ ಅವತರಣಿಕೆಯ ಪ್ರಸಾರ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಆದರೆ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.

ಯಾವ ಫ್ಲಾಟ್‌ಫಾರ್ಮ್‌?

ʼಸಲಾರ್‌ʼ ಒಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್‌ ಬರೋಬ್ಬರಿ 160 ಕೋಟಿ ರೂ.ಗೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಮಾಲಿವುಡ್‌ ಸೂಪರ್‌ ಸ್ಟಾರ್‌, ಬಹುಭಾಷಾ ನಟ ಪೃಥ್ವಿರಾಜ್‌ ಸುಕುಮಾರನ್‌, ಶ್ರುತಿ ಹಾಸನ್‌, ಜಗಪತಿ ಬಾಬು, ಈಶ್ವರಿ ರಾವ್‌ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.  ʼಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಬಹುದೊಡ್ಡ ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್‌ ʼಸಲಾರ್‌ʼ ಮೂಲಕ ಇನ್ನೊಂದು ಗೆಲುವು ದಾಖಲಿಸಿದೆ. ‘ಉಗ್ರಂ’ ಕಥೆಯನ್ನೇ ಸಾಕಷ್ಟು ಬದಲಾವಣೆಯೊಂದಿಗೆ ಬಹಳ ದೊಡ್ಡಮಟ್ಟದಲ್ಲಿ ನೀಲ್ ಕಟ್ಟಿಕೊಟ್ಟಿದ್ದಾರೆ. ಆದರೂ ಈ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ʼಸಲಾರ್‌ 1′ ಈಗಾಗಲೇ ‘ಕೆಜಿಎಫ್‌ ಚಾಪ್ಟರ್‌ 1’, ‘ಪುಷ್ಪ 1’ ಮತ್ತು ‘ಬಾಹುಬಲಿ 1’ ಚಿತ್ರಗಳ ಕಲೆಕ್ಷನ್‌ ಮೀರಿದೆ. 2017ರಲ್ಲಿ ತೆರೆಕಂಡ ʼಬಾಹುಬಲಿ 2ʼ ಬಳಿಕ ಪ್ರಭಾಸ್‌ ಸತತ ಸೋಲಿಗೆ ತುತ್ತಾಗಿದ್ದರು. ʼಸಾಹೋʼ, ʼರಾಧೇ ಶ್ಯಾಮ್‌ʼ ಮತ್ತು ʼಆದಿ ಪುರುಷ್‌ʼ ಚಿತ್ರಗಳಿಗೆ ಪ್ರೇಕ್ಷಕರು ಗಮನ ಸೆಳೆಯುವಲ್ಲಿ ವಿಫಲವಾಗಿದ್ದವು. ಇದೀಗ ಕೊನೆಗೂ ಪ್ರಭಾಸ್‌ ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ: Salaar Movie: ʻಸಲಾರ್‌ʼ ಸಿನಿಮಾದಲ್ಲಿ ಕನ್ನಡಿಗರದ್ದೇ ಹವಾ!

ಎರಡನೇ ಪಾರ್ಟ್‌ ಯಾವಾಗ?

ʼಸಲಾರ್‌ʼ ಎರಡು ಭಾಗಗಳಲ್ಲಿ ತಯಾರಾಗಿದೆ. ನೋಡುಗರಲ್ಲಿ ಕುತೂಹಲದ ಬೀಜ ಬಿತ್ತಿ ಮೊದಲ ಪಾರ್ಟ್‌ ಕೊನೆಗೊಂದಿದೆ. ಹೀಗಾಗಿ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಎರಡನೇ ಭಾಗ ಯಾವಾಗ ತೆರೆಗೆ ಬರಲಿದೆ ಎನ್ನುವ ಬಗ್ಗೆ ಚಿತ್ರತಂಡ ಇದುವರೆಗೆ ಘೋಷಿಸಿಲ್ಲ. ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರಭಾಸ್‌ ಮತ್ತು ತಂಡ ಶೀಘ್ರ ಎರಡನೇ ಪಾರ್ಟ್‌ ಅನ್ನೂ ಬಿಡುಗಡೆಗೊಳಿಸಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version