ಬೆಂಗಳೂರು: ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದ ಇನ್ನಷ್ಟು ಗಣ್ಯರು, ಸ್ಪಂದನಾ ಕುಟುಂಬ ಬಳಗದವರು ಹಾಗೂ ಸ್ನೇಹಿತರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಶೋಕ ಸಾಗರದಲ್ಲಿ ಚಿನ್ನಾರಿ ಮುತ್ತ ಕುಟುಂಬಕ್ಕೆ ಧೈರ್ಯ ಹೇಳಲು ಸಾರ್ವಜನಿಕರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಮಾಧ್ಯಮದ ಮುಂದೆ ನಟಿ ಮಾತನಾಡಿ ʻರಾಘು- ಸ್ಪಂದನಾ ನನ್ನ ಫಾಮಿಲಿ ಇದ್ದಂತೆ. ಅವರೂ ನಮ್ಮ ಕುಟುಂಬವೇ. ನನ್ನ ಕುಟುಂಬಕ್ಕೆ ಆಗಿರುವ ನೋವಿದು. ರಾಘು-ಸ್ಪಂದನಾ ನಮಗೆ ಬಹಳ ಆತ್ಮೀಯರಾಗಿದ್ದರು. ಏನು ನಡೆದಿದೆ, ಏನು ಆಗಿದೆ ಎನ್ನುವುದು ಅವರ ಕುಟುಂಬಕ್ಕೆ ತಿಳಿದಿರುತ್ತದೆ. ಸ್ಪಂದನಾ ಬಗ್ಗೆ ಅಪಪ್ರಚಾರ ಮಾಡಬೇಡಿ. ಆಕೆಗೆ ಮರ್ಯಾದೆ ಕೊಡಿ. ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೇ ಇರುವ ಸುದ್ದಿಗಳನ್ನು ಹರಡಬೇಡಿ. ಅವರ ಕುಟುಂಬಕ್ಕೆ ಸ್ಪೆಸ್ ಕೊಡಿ .ರಾಘು- ಸ್ಪಂದನಾ ಅನ್ಯೋನ್ಯವಾಗಿ ಬದುಕುತ್ತಿದ್ದರುʼʼ ಎಂದರು.
ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಧ್ರುವ ಸರ್ಜಾ ಕೂಡ ಆಗಮಿಸಿದ್ದಾರೆ. ನಟಿ ರಕ್ಷಿತಾ, ಪ್ರೇಮ್ ದಂಪತಿ ಆಗಮಿಸಿ ಪ್ರೀತಿಯ ರಾಘುಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ: Spandana Vijay Raghavendra: ಹೋದವರು ಹೊರಟು ಹೋಗ್ತಾರೆ, ಇರೋರ ಕಷ್ಟ ನೋಡಿ! ಎಂದು ರಾಘಣ್ಣ ಭಾವುಕ
ಭಾವುಕರಾದ ಬಿ.ಕೆ ಹರಿಪ್ರಸಾದ್
ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ವಿವರ ನೀಡುತ್ತಾ ಬಿ.ಕೆ ಹರಿಪ್ರಸಾದ್ ಭಾವುಕರಾದರು. ʼಸ್ಪಂದನಾ ಅವರ ಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತದೆ. ಅಂತಿಮ ಯಾತ್ರೆ 2 ಗಂಟೆಗೆ ಆರಂಭ ಮಾಡುತ್ತೇವೆ. ಅವರ ಅಂತ್ಯಕ್ರಿಯೆಯನ್ನು ಹರಿಶ್ಚಂದ್ರ ಘಾಟ್ನಲ್ಲಿ 2.30ರಿಂದ 3.30ರ ಒಳಗೆ ಮಾಡುತ್ತೇವೆʼ ಎಂದು ಹರಿಪ್ರಸಾದ್ ನುಡಿದರು.
ರಂಗಾಯಣ ರಘು ಈ ಬಗ್ಗೆ ಮಾತನಾಡಿ ʻʻಚಿತ್ರರಂಗದಲ್ಲಿ ಕಣ್ಣೀರು ಜಾಸ್ತಿ ಆಗುತ್ತಿದೆ. ಈ ನೋವಿನ ಮೆರವಣಿಗೆ ಯಾರಿಗೇ ಆಗಲಿ ಹಿಂಸೆಯಾಗುತ್ತದೆ. ರಾಘು ಅಂತೂ ಹಸುಗೂಸು. ಭಗವಂತನಲ್ಲಿ ಸಾಕು ಮಾಡಪ್ಪ ಎಂದು ಕೇಳಬಹುದು. ರಾಜ್ ಕುಟುಂಬಕ್ಕೆ ಸಾಕಷ್ಟು ಪರೀಕ್ಷೆ ಬಂದೋಯ್ತುʼʼ ಎಂದು ಭಾವುಕರಾದರು.