ಬೆಂಗಳೂರು: ‘ಕಲ್ಕಿ 2898 ಎಡಿ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕೇವಲ 11 ದಿನಕ್ಕೆ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ ಸ್ಯಾಕ್‌ನಿಲ್ಕ್ ಪ್ರಕಾರ, ಚಿತ್ರವು ತನ್ನ ಎರಡನೇ ಭಾನುವಾರದಂದು 500 ಕೋಟಿ ಮೈಲಿಗಲ್ಲನ್ನು ದಾಟಿದೆ.
ಕಲ್ಕಿ 2898 AD ತನ್ನ ಮೊದಲ ವಾರದಲ್ಲಿ ಒಟ್ಟು ರೂ 414.85 ಕೋಟಿ ಗಳಿಸಿತು. ಕಲ್ಕಿ ವಿಶ್ವ ಬಾಕ್ಸ್ ಆಫೀಸ್ನಲ್ಲೂ ಮಿಂಚುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಮೊದಲಾದ ಕಡೆಗಳಲ್ಲಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿ ಗಳಿಸಿದೆ. ಶೀಘ್ರವೇ ಚಿತ್ರ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.
ತೆಲುಗು ಪ್ರದರ್ಶನಗಳಲ್ಲಿ 242.85 ಕೋಟಿ ರೂಪಾಯಿಗಳನ್ನು ಮತ್ತು ಹಿಂದಿ ಪ್ರದರ್ಶನಗಳಲ್ಲಿ 211.9 ಕೋಟಿ ರೂಪಾಯಿಗಳನ್ನು ಗಳಿಸಿದೆ. ಚಿತ್ರದ ತಮಿಳು ಶೋಗಳು 30.1 ಕೋಟಿ, ಮಲಯಾಳಂ ಶೋ 18.2 ಕೋಟಿ ಮತ್ತು ಕನ್ನಡ ಪ್ರದರ್ಶನಗಳು ರೂ 3.95 ಕೋಟಿ ರೂ. ಆಗಿದೆ.
ನಾಗ್ ಅಶ್ವಿನ್ ಅವರು ‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಣದಿಂದಲೇ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡೋ ಅವಶ್ಯಕತೆ ಇತ್ತು. ಸದ್ಯ ಆಗಿರೋ ಗಳಿಕೆಯಿಂದ ನಿರ್ಮಾಪಕರಿಗೆ ಇನ್ನೂ ದೊಡ್ಡ ಲಾಭವೇನು ಆಗಿಲ್ಲ. ‘ಕಲ್ಕಿ 2898 ಎಡಿ’ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಿದೆ. ವೈಜಯಂತಿ ಮೂವಿಸ್ ಮೂಲಕ ಅಶ್ವಿನಿ ದತ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಸಲಾರ್’ ನಂತರ ಬಿಡುಗಡೆಯಾದ ಕಲ್ಕಿ ಸಿನಿಮಾ ಮೂಲಕ, ಪ್ರಭಾಸ್ ಚಿತ್ರೋದ್ಯಮದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ತಲುಪಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪ್ರಭಾಸ್ ಸಿನಿಮಾಗಳಿಗೆ ಸಿಗುತ್ತಿವೆ. ಇದೀಗ ‘ಕಲ್ಕಿ 2898 AD’ ಸಿನಿಮಾ ಸಹ ಇದಕ್ಕೆ ಹೊರತಾಗಿಲ್ಲ, ಇದು ಭಾರತೀಯ ಚಿತ್ರರಂಗದಲ್ಲಿ ಅವರ ಮೂರನೇ ಅತಿದೊಡ್ಡ ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ.
ಇದನ್ನೂ ಓದಿ: Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್!
‘ಬಾಹುಬಲಿ’ಯಿಂದ ‘ಸಲಾರ್’, ‘ಕಲ್ಕಿ 2898 AD’ ವರೆಗೆ ಪ್ರಭಾಸ್ ತಮ್ಮ ಸ್ಟಾರ್ ಪವರ್‌ಗೆ ಸಾಟಿಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಸಮಕಾಲೀನ ಸಿನಿಮಾರಂಗದಲ್ಲಿ ಅತ್ಯಂತ ಅಪ್ರತಿಮ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಪ್ರಭಾಸ್. ಅಂದಹಾಗೆ ನಾಗ್ ಅಶ್ವಿನ್ ನಿರ್ದೇಶಿಸಿದ, ‘ಕಲ್ಕಿ 2898 AD’ 2898 AD ವರ್ಷದಲ್ಲಿ ಹಿಂದೂಗಳ ಮಹಾಕಾವ್ಯ ಮಹಾಭಾರತದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ಆಕ್ಷನ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ಲೆಜಂಡರಿ ಕಲಾವಿದರಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಸೇರಿ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.